ಕಾರವಾರದ ಕಾಳಿ ನದಿಯಲ್ಲಿ ಕಯಾಕಿಂಗ್ ಮಾಡಲು ತೆರಳಿದ್ದ ರೆಸಾರ್ಟನ ಮಾಜಿ ಸಿಬ್ಬಂದಿ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಸತೀಶ ಮಾಳ್ಸೇಕರ್ ಅವರು ಬುಧವಾರ ಹಣಕೋಣದಲ್ಲಿ ಕಾಣೆಯಾಗಿದ್ದು, ಗುರುವಾರ ಶವವಾಗಿ ಸಿಕ್ಕಿದ್ದಾರೆ.
ಕಾರವಾರದ ಹೊಡ್ಲೇಬಾಗ-ಮುಡಗೇರಿಯ ಸತೀಶ ಮಾಳ್ಸೇಕರ್ ಅವರು ಕಾರವಾರದಲ್ಲಿ ನೆಲೆಸಿದ್ದರು. ನೌಕಾನೆಲೆ ಬಳಿ ಅವರು ರೆಸ್ಟೋರೆಂಟ್ ನಡೆಸುತ್ತಿದ್ದರು. ಬುಧವಾರ ಹಣಕೋಣದ ರಿವರ್ ಎಡ್ಜ್ ಪ್ಯಾರಡೈಸ್ ರೆಸೋರ್ಟಿಗೆ ಹೋಗಿದ್ದ ಅವರು ಕಯಾಕ್ ಬೋಟ್‌ನಲ್ಲಿ ಕಾಳಿ ನದಿಗೆ ತೆರಳಿದ್ದರು. ಈ ವೇಳೆ ಅವರು ನದಿಯಲ್ಲಿ ಕಣ್ಮರೆಯಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದ್ದರು. ಪೊಲೀಸರ ಜೊತೆ ಸ್ಥಳೀಯರು ಹುಡುಕಾಟ ನಡೆಸಿದರೂ ಆ ದಿನ ಅವರ ಸುಳಿವು ಸಿಕ್ಕಿರಲಿಲ್ಲ.
ಗುರುವಾರ ನದಿಯಲ್ಲಿ ಶವ ಸಿಕ್ಕಿದ್ದು, ಅದು ಸತೀಶ್ ಮಾಳ್ಸೇಕರ್ ಅವರದ್ದು ಎಂದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆಗೆ ದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸತೀಶ ಮಾಳ್ಸೇಕರ ಅವರು ಸುಮಾರು ಎಂಟು ವರ್ಷಗಳ ಹಿಂದೆ ಇದೇ ರಿವರ್ ಎಡ್ಜ್ ಪ್ಯಾರಡೈಸ್ ರಿಸೋರ್ಟ್ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಸದ್ಯ ಅದೇ ರೆಸಾರ್ಟಿಗೆ ಬಂದು ಶವವಾಗಿದ್ದಾರೆ.