ಕುಮಟಾಗೆ ಭೇಟಿ ನೀಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರು ಆರೋಗ್ಯ ಕ್ಷೇತ್ರದ ವಿಚಾರವಾಗಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ಅಪಘಾತಕ್ಕೊಳಗಾದವರಿಗೆ ಮೊದಲ 7 ದಿನದವರೆಗಿನ 2.5 ಲಕ್ಷ ರೂಪಾಯಿಯ ಉಚಿತ ಚಿಕಿತ್ಸೆ ನೀಡುವ ಯೋಜನೆ ಶುರು ಮಾಡುವ ಬಗ್ಗೆ ಅವರು ಮಾತನಾಡಿದ್ದಾರೆ.
ಮಂಗಳವಾರ ಕುಮಟಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅವರ ಸಿಎಸ್‌ಆರ್ ನಿಧಿಯಲ್ಲಿ ನಿರ್ಮಿಸಿದ ಟ್ರಾಮಾ ಕೇರ್ ಸೆಂಟರ್ ಮತ್ತು ತುರ್ತು ಚಿಕಿತ್ಸಾ ಘಟಕ ಉದ್ಘಾಟಿಸಿದ ಸಚಿವರು `ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಸಾರ್ವಜನಿಕರು ಅಸ್ಪತ್ರೆಗೆ ಸೇರಿಸಿದರೆ ಅವರ ಚಿಕಿತ್ಸಾ ವೆಚ್ಚ ಯಾರು ಪಾವತಿಸುವುದು?’ ಎಂಬ ಗೊಂದಲವಿದೆ. ಅದನ್ನು ತಪ್ಪಿಸುವುದಕ್ಕಾಗಿ ಅಪಘಾತವಾದ ವ್ಯಕ್ತಿಗೆ ತಕ್ಷಣ ಅಗತ್ಯ ತುರ್ತು ಚಿಕಿತ್ಸೆಗೆ ಒಳಪಡಿಸಿ, ಆಸ್ಪತ್ರೆಗೆ ದಾಖಲಾದ ಮೊದಲ 7 ದಿನಗಳವರೆಗೆ ರೂ 2.5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಜಾರಿಗೆ ತರಲು ಮುಖ್ಯಮಂತ್ರಿಗಳೊoದಿಗೆ ಚರ್ಚೆ ನಡೆಸಲಾಗಿದೆ’ ಎಂದವರು ತಿಳಿಸಿದರು.
`ರಾಜ್ಯದಲ್ಲಿ ಅಪಘಾತ ಮತ್ತು ತುರ್ತು ಸಂದರ್ಭದಲ್ಲಿ ಕರೆ ಮಾಡಿದ 15 ನಿಮಿಷಗಳ ಒಳಗೆ ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪುವಂತೆ ಹೊಸ ವ್ಯವಸ್ಥೆ ರೂಪಿಸಲಾಗುಗುತ್ತಿದ್ದು, ನಿಯಮಿತ ಸಮಯದಲ್ಲಿ ಆಂಬ್ಯುಲೆನ್ಸ್ ತಲುಪದಿದ್ದರೆ ಸಂಬAಧಪಟ್ಟ ಆಂಬ್ಯುಲೆನ್ಸ್ ನಿರ್ವಹಣಾ ಸಂಸ್ಥೆಗೆ ರೂ 3,000ದಿಂದ 5,000 ದಂಡ ವಿಧಿಸುವ ಕಾಯ್ದೆ ತರಲಾಗುತ್ತದೆ. `ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಅನಾರೋಗ್ಯ ತರುವ ಜಂಕ್ ಫುಡ್ ಸಿಗದಂತೆ ತಡೆಯಲು ಫುಡ್ ಸೇಫ್ಟಿ ಆಕ್ಟ್’ ಅಡಿಯಲ್ಲಿ ಕಠಿಣ ನಿಯಮ ರೂಪಿಸಲಾಗುವುದು. ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಲು ಹೈ-ಟೆಕ್ ಲ್ಯಾಬ್ ಸ್ಥಾಪಿಸಿ, ಕಲಬೆರಕೆ ಅಥವಾ ಕಳಪೆ ಆಹಾರ ಮಾರಾಟ ಮಾಡುವ ಕಂಪನಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇತ್ತೀಚೆಗೆ ಹೃದಯಾಘಾತ, ಕ್ಯಾನ್ಸರ್, ಕಿಡ್ನಿ ಸಮಸ್ಯೆಗಳಂತಹ ಅಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಉತ್ತಮ ಜೀವನಶೈಲಿ ಮತ್ತು ಪರಿಸರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು ಸಮಾಜದ ಕರ್ತವ್ಯವಾಗಿದೆ’ ಎಂದರು.
`ಕುಮಟಾದಲ್ಲಿ ಟ್ರಾಮಾ ಕೇರ್ ಸೆಂಟರ್ ಪ್ರಾರಂಭವಾಗಿರುವುದು ತುರ್ತು ಮತ್ತು ಎಮರ್ಜೆನ್ಸಿ ಸಮಯದಲ್ಲಿ ಜೀವ ಉಳಿಸಲು ಅತ್ಯಂತ ಅಗತ್ಯವಾಗಿದೆ. ಇದು ರಾಜ್ಯದ ಆರೋಗ್ಯ ಇಲಾಖೆಯಿಂದ ಪ್ರಾರಂಭಗೊAಡ 3ನೇ ಕೇಂದ್ರವಾಗಿದೆ. ಈ ಆಸ್ಪತ್ರೆಗೆ ಬೇಕಾಗುವ ಹೆಚ್ಚುವರಿ ಉಪಕರಣಗಳು ಮತ್ತು ಮೂಲಸೌಕರ್ಯಗಳಿಗೆ ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಅವರು ಮಂಗಳೂರಿನ ಎ.ಜೆ ಆಸ್ಪತ್ರೆ. ಹಾಗೂ ಶ್ರೀನಿವಾಸ ಆಸ್ಪತ್ರೆಗಳು ಈ ಟ್ರಾಮಾ ಕೇರ್ ಸೆಂಟರ್ ಅನ್ನು ದತ್ತು ತೆಗೆದುಕೊಂಡು ಸೇವೆ ನೀಡಲು ಮನವಿ ಮಾಡಲಾಗುತ್ತದೆ’ ಎಂದರು. `ಕುಮಟಾ ಆಸ್ಪತ್ರೆಯು ಹೆದ್ದಾರಿಯ ಬಳಿ ಇರುವ ಆಸ್ಪತ್ರೆಯಾದ್ದರಿಂದ ಅಪಘಾತ ಅಥವಾ ತುರ್ತು ಸಂದರ್ಭದಲ್ಲಿ ಶವಾಗಾರಕ್ಕೆ ಆಗಮಿಸುವ ಕುಟುಂಬಸ್ಥರಿಗೆ ಅನುಕೂಲವಾಗುವಂತೆ ಆಸನ ವ್ಯವಸ್ಥೆ, ಫ್ಯಾನ್, ಬೆಳಕು, ಪೊಲೀಸ್ ಪಂಚನಾಮೆ ಕೊಠಡಿ, ವೈದ್ಯರ ಕೊಠಡಿ ಮತ್ತು ಫ್ರೀಜರ್ ಒಳಗೊಂಡ ಆಧುನಿಕ ಮಾರ್ಚುರಿ’ ಕಟ್ಟಡ ನಿರ್ಮಿಸಬೇಕು’ ಎಂದು ಸೂಚಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ `ಈ ಟ್ರಾಮಾ ಕೇರ್ ಸೆಂಟರ್ ಯೂನಿಟ್‌ಗೆ ಸುಮಾರು ರೂ.2.73 ಕೋಟಿ ರೂಪಾಯಿ ವೆಚ್ಚದ ಅಗತ್ಯವಿತ್ತು. ಈಯೋಜನೆ ಸಾಕಾರಗೊಳ್ಳಲು ಬಿಇಎಲ್ ಸಂಸ್ಥೆಯು ರೂ. 2.73 ಕೋಟಿ ಅನುದಾನ ನೀಡುವ ಮೂಲಕ ಈ ಯೋಜನೆಗೆ ಬಲ ನೀಡಿದೆ. ಸ್ಥಳೀಯ ರೋಟರಿ ಕ್ಲಬ್ ಈ ಆಸ್ಪತ್ರೆಯ ಅಭಿವೃದ್ಧಿಗೆ ಸುಮಾರು ರೂ. 1.70 ಕೋಟಿಗೂ ಹೆಚ್ಚಿನ ಕೊಡುಗೆಯನ್ನು ನೀಡಿದೆ’ ಎಂದರು.
.