ಬಡವರ ಹಸಿವು ನೀಗಿಸಲು ಸರ್ಕಾರ ಪೂರೈಸುವ ಅನ್ನಭಾಗ್ಯದ ಅಕ್ಕಿಯನ್ನು ಸೊರಬಾದ ನಾಗರಾಜ ಗೌಡ ಅವರು ಕಾಳಸಂತೆಯಲ್ಲಿ ಖರೀದಿಸುತ್ತಿದ್ದು, ಈ ಕಾನೂನುಬಾಹಿರ ವ್ಯವಹಾರಕ್ಕೆ ಅಧಿಕಾರಿಗಳು ಅಡ್ಡಗಾಲು ಹಾಕಿದ್ದಾರೆ. ಆಹಾರ ಶಿರಸ್ತೆದಾರ್ ಕವಿತಾ ಪಾಟಣಕರ್ ಅವರು ರಾತ್ರಿ 11.30ಕ್ಕೆ ವಿಶೇಷ ಕಾರ್ಯಾಚರಣೆ ನಡೆಸಿ ನಾಗರಾಜ ಗೌಡ ಅವರ ಅಕ್ರಮವನ್ನು ಬಯಲಿಗೆಳೆದಿದ್ದಾರೆ.
ಸೊರಬಾ ಕೊರಕೋಡ ಕಪಗುಡ್ಡೆಯಲ್ಲಿ ಸಚಿನ್ ನಾಗರಾಜ ಗೌಡ ಅವರು ವಾಸವಾಗಿದ್ದಾರೆ. ಚಾಲಕರಾಗಿರುವ ಅವರು ಸರ್ಕಾರಿ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿಸಿ ಸೊರಬಾಗೆ ಸಾಗಿಸುತ್ತಾರೆ. ಅಲ್ಲಿ ಆ ಅಕ್ಕಿಯನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ ಶ್ರೀಮಂತರಾಗುವ ಪ್ರಯತ್ನ ಮಾಡಿದ್ದಾರೆ. ಅದರಂತೆ, ಜುಲೈ 26ರಂದು ಶಿರಸಿಗೆ ಬಂದ ಅವರು ಅಲ್ಲಿ-ಇಲ್ಲಿ ಅಕ್ಕಿ ಖರೀದಿ ಮಾಡಿದ್ದಾರೆ. ಅದಾದ ನಂತರ ಬನವಾಸಿಯ ಕೋರ್ಲಕಟ್ಟಾಗೆ ಹೋಗಿ ಅಲ್ಲಿಯೂ ಅನೇಕರ ಬಳಿ ಅಕ್ಕಿ ಖರೀದಿಸಿದ್ದಾರೆ. ಬಡವರಿಗೆ ದುಡ್ಡಿನ ಆಮೀಷ ಒಡ್ಡಿ ಕಡಿಮೆ ಬೆಲೆಗೆ ಅಕ್ಕಿ ಖರೀದಿಸಿ ಅದನ್ನು ಅವರು ಸೊರಬಾಗೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ.
ಶಿರಸಿಯ ತಹಶೀಲ್ದಾರ್ ಕಚೇರಿಯಲ್ಲಿ ಆಹಾರ ಶಿರಸ್ತೆದಾರ್ ಆಗಿರುವ ಕವಿತಾ ಪಾಟಣಕರ್ ಅವರಿಗೆ ಈ ವಿಷಯ ಗೊತ್ತಾಗಿದೆ. ತಹಶೀಲ್ದಾರ್ ಕಚೇರಿ ಸಿಬ್ಬಂದಿ ಹಾಗೂ ಪೊಲೀಸರ ಸಹಾಯಪಡೆದು ಅವರು ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ ಬನವಾಸಿ-ದಾನಸಕೊಪ್ಪ ರಸ್ತೆ ಮಾರ್ಗವಾಗಿ ಸೊರಬಾ ಕಡೆಗೆ ಸಾಗಿಸುತ್ತಿದ್ದ 1 ಟನ್’ಗಿಂತಲೂ ಅಧಿಕ ಪ್ರಮಾಣದ ಅಕ್ಕಿ ಈ ವೇಳೆ ಸಿಕ್ಕಿ ಬಿದ್ದಿದೆ. ಕಾಳ ಸಂತೆಯ ಅಕ್ಕಿ ವ್ಯವಹಾರವನ್ನು ಅಧಿಕಾರಿಗಳು ಬಯಲಿಗೆಳೆದಿದ್ದು, ನಾಗರಾಜ ಗೌಡ ಅವರ ವಿರುದ್ಧ ಕೇಸು ದಾಖಲಿಸಿದ್ದಾರೆ.