ಪ್ರಧಾನ ಮಂತ್ರಿ ಜನಧನ ಯೋಜನೆ ಅಡಿ ಕಡಿಮೆ ಬಡ್ಡಿಗೆ ಸಾಲ ಕೊಡುವುದಾಗಿ ಫೋನ್ ಮಾಡಿದ ಅಪರಿಚಿತರು ಹರೀಣಿ ಹೆಬ್ಬಾರ್ ಅವರಿಗೆ ಮೋಸ ಮಾಡಿದ್ದಾರೆ. ಸಾಲ ಸಿಗುವ ಖುಷಿಗೆ ಹರೀಣಿ ಹೆಬ್ಬಾರ್ ಅವರು 68.58 ಲಕ್ಷ ರೂ ಕಳೆದುಕೊಂಡಿದ್ದಾರೆ.
ಭಟ್ಕಳದ ಹಳ್ಳಿಕೇರಿ ಕೋಟಖಂಡ ಮಾರುಕೇರಿ ಬಳಿ ಹರೀಣಿ ಗಜಾನನ ಹೆಬ್ಬಾರ ಅವರು ವಾಸವಾಗಿದ್ದಾರೆ. 31 ವರ್ಷದ ಅವರು ಮನೆ ಕೆಲಸ ಮಾಡಿಕೊಂಡಿದ್ದು, ಅವರಿಗೆ 2024ರ ಫೆಬ್ರವರಿ 20ರಿಂದ 2026ರ ಜನವರಿ 25ರವರೆಗೆ ಪ್ರಧಾನ ಮಂತ್ರಿ ಜನಧನ ಯೋಜನೆಯ ಅಧಿಕಾರಿ ಎಂಬ ಸೋಗಿನಲ್ಲಿ ಅವರಿಗೆ ಫೋನ್ ಬಂದಿದೆ. `ಕಡಿಮೆ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಿಕೊಡುತ್ತೇವೆ’ ಎಂದು ಫೋನ್ ಮಾಡಿದವರು ಹೇಳಿದ್ದಾರೆ. ಫೋನ್ ಮಾಡಿದವರು ನವೀನ ಕುಮಾರ, ಪ್ರಕಾಶ ಕುಮಾರ ಹಾಗೂ ಲಕ್ಷ್ಮೀ ಎಂದು ಪರಿಚಯಿಸಿಕೊಂಡಿದ್ದು, ವಾಟ್ಸಪ್ ಮೂಲಕವೂ ವಿವಿಧ ದಾಖಲೆ ಕಳುಹಿಸಿದ್ದಾರೆ.
ಆರಂಭದಲ್ಲಿ ಪ್ರಕ್ರಿಯೆ ಶುಲ್ಕದ ಹೆಸರಿನಲ್ಲಿ 94,644ಪಡೆದ ಅವರು ಬಳಿಕ ಸಾಲ ಮಂಜೂರಿಗೆ ಪ್ರೊಸೆಸಿಂಗ್ ಶುಲ್ಕ, ಜಿಎಸ್‌ಟಿ, ಭದ್ರತಾ ಠೇವಣಿ, ವಿಮೆ, ಎನ್‌ಒಸಿ ಹಾಗೂ ದಾಖಲೆ ಪರಿಶೀಲನೆ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಪದೇ ಪದೆ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಹರೀಣಿ ಹೆಬ್ಬಾರ ಅವರು ಕರ್ನಾಟಕ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಖಾತೆಗಳಿಗೆ ಒಟ್ಟು 68,58,754 ವರ್ಗಾವಣೆ ಮಾಡಿದ್ದಾರೆ. ಆದರೆ ಇಷ್ಟೊಂದು ಹಣ ಪಡೆದಿದ್ದರೂ ಯಾವುದೇ ಸಾಲ ಮಂಜೂರು ಮಾಡಿಲ್ಲ. ಪಡೆದ ಹಣವನ್ನು ಮರಳಿಸಿಲ್ಲ. ಮೋಸ ಹೋಗಿದನ್ನು ಅರಿತು ಹರೀಣಿ ಹೆಬ್ಬಾರ್ ಅವರು ಪೊಲೀಸ್ ದೂರು ನೀಡಿದ್ದಾರೆ.