ಬೆಳಕೆ ಹೊನ್ನೆಮುಡಿಯ ಮಾದೇವ ನಾಯ್ಕ ಅವರು ನಿಧನರಾಗಿದ್ದು, ಅಬ್ಬಿಹಿತ್ಲುವಿನ ಮಂಜುನಾಥ ನಾಯ್ಕ ಅವರು ಮಾಟ-ಮಂತ್ರ ಮಾಡಿಸಿದ ಅನುಮಾನ ಶುರುವಾಗಿದೆ. ಅದೇ ಅನುಮಾನದಿಂದ ಮಾದೇವ ನಾಯ್ಕ ಅವರ ಪುತ್ರರಾದ ದೇವಿದಾಸ ನಾಯ್ಕ ಹಾಗೂ ವೆಂಕಟೇಶ ನಾಯ್ಕ ಅವರು ಮಂಜುನಾಥ ನಾಯ್ಕ ಅವರಿಗೆ ಸ್ಟೀಲ್ ರಾಡಿನಿಂದ ಹೊಡೆದಿದ್ದಾರೆ!
ಭಟ್ಕಳದ ಬೆಳಕೆ ಹೊನ್ನೆಮುಡಿಯಲ್ಲಿ ಮಾದೇವ ನಾಯ್ಕ ಅವರು ವಾಸವಾಗಿದ್ದರು. ನಾಲ್ಕು ದಿನಗಳ ಹಿಂದೆ ಅವರು ದಿಢೀರ್ ಆಗಿ ಸಾವನಪ್ಪಿದರು. ಭಟ್ಕಳ ಬೆಳಕೆ ಬಳಿಯ ಮಂಜುನಾಥ ನಾಯ್ಕ ಕುಟುಂಬದವರು ಮಾಟ-ಮಂತ್ರ ಮಾಡಿ ಮಾದೇವ ನಾಯ್ಕ ಅವರನ್ನು ಸಾಯಿಸಿದ್ದಾರೆಂದು ಮಾದೇವ ನಾಯ್ಕ ಅವರ ಮಕ್ಕಳು ಭಾವಿಸಿದ್ದಾರೆ. ಅದಕ್ಕಾಗಿಯೇ ಅವರು ಮಂಜುನಾಥ ನಾಯ್ಕ ಅವರ ಮೇಲೆ ಹಗೆ ಸಾಧಿಸಿದ್ದಾರೆ.
ಜುಲೈ 26ರಂದು ಮಂಜುನಾಥ ನಾಯ್ಕ ಅವರು ತಮ್ಮ ಪತ್ನಿ ಜ್ಯೋತಿ ನಾಯ್ಕ ಅವರ ಜೊತೆ ದೇವಿದಾಸ ನಾಯ್ಕ ಹಾಗೂ ವೆಂಕಟೇಶ ನಾಯ್ಕ ಅವರನ್ನು ಮಾತನಾಡಿಸಲು ಹೋಗಿದ್ದಾರೆ. ಯೋಗ ಕ್ಷೇಮ ವಿಚಾರಿಸಲು ಬಂದಿದ್ದ ಮಂಜುನಾಥ ನಾಯ್ಕ ಅವರ ದಂಪತಿಯನ್ನು ದೇವಿದಾಸ ನಾಯ್ಕ ಹಾಗೂ ವೆಂಕಟೇಶ ನಾಯ್ಕ ಸೇರಿ ಕೆಟ್ಟದಾಗಿ ನಿಂದಿಸಿದ್ದಾರೆ. ಅವರಿಬ್ಬರನ್ನು ದೇವಿದಾಸ ನಾಯ್ಕ ಅವರು ಮನೆಯೊಳಗೆ ಬರಲು ಬಿಡದೇ ರಸ್ತೆಯಲ್ಲಿಯೇ ತಡೆದಿದ್ದಾರೆ. `ನೀವು ಮಾಟ ಮಂತ್ರ ಮಾಡಿಸಿ ತಂದೆಯನ್ನು ಸಾಯಿಸಿದ್ದೀರಿ’ ಎಂದು ಕೂಗಾಡಿದ್ದಾರೆ.
ಈ ವೇಳೆ ವೆಂಕಟೇಶ ನಾಯ್ಕ ಅವರು ಮಂಜುನಾಥ ನಾಯ್ಕ ರಾಡಿನಿಂದ ಹೊಡೆದಿದ್ದಾರೆ. ಈ ಹೊಡೆದಾಟ ತಪ್ಪಿಸಲು ಹೋದ ಜ್ಯೋತಿ ನಾಯ್ಕ ಅವರು ಸಹ ಥಳಿತಕ್ಕೆ ಒಳಗಾಗಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಜ್ಯೋತಿ ನಾಯ್ಕ ಅವರು ಪೊಲೀಸರಿಗೆ ತಿಳಿಸಿ, ದೇವಿದಾಸ ನಾಯ್ಕ ಹಾಗೂ ವೆಂಕಟೇಶ ನಾಯ್ಕ ಅವರ ವಿರುದ್ಧ ಕೇಸು ದಾಖಲಿಸಿದ್ದಾರೆ.