ಭಟ್ಕಳದಲ್ಲಿ ಸ್ಟಾಂಡರ್ಡ ಕಾರ್ಗೋ ಸರ್ವೀಸ್ ನಡೆಸುವ ರಾಜೇಶ ನಾಯ್ಕ ಅವರು ತಮ್ಮ ಸಹಚರ ಸಚಿನ್ ನಾಯ್ಕ ಅವರ ಜೊತೆ ಸೇರಿ ರೈಲು ನಿಲ್ದಾಣದ ಹಮಾಲಿ ಗಣಪತಿ ನಾಯ್ಕ ಅವರಿಗೆ ಹೊಡೆದಿದ್ದಾರೆ. ರೈಲಿನ ಮೂಲಕ ಬಂದ ಪಾರ್ಸಲ್’ಗಳನ್ನು ಕಮರ್ಷಿಯಲ್ ಅಧಿಕಾರಿಗಳ ಮುಂದೆ ಹಾಜರುಪಡಿಸಿದ ಕಾರಣ ಹಲ್ಲೆ ಮಾಡಿದ್ದಾರೆ.
ಭಟ್ಕಳ ಮುಟ್ಟಳ್ಳಿ ಮುಂಡೋಳಿಮನೆಯ ಗಣಪತಿ ನಾರಾಯಣ ನಾಯ್ಕ ಅವರು ಐದು ವರ್ಷದಿಂದ ರೈಲು ನಿಲ್ದಾಣದಲ್ಲಿ ಹಮಾಲಿಯಾಗಿದ್ದಾರೆ. ಭಟ್ಕಳದ ರಘುನಾಥ ರೋಡಿನಲ್ಲಿರುವ ರಾಜೇಶ್ ನಾರಾಯಣ ನಾಯ್ಕ ಅವರ ಸ್ಟಾಂಡರ್ಡ ಕಾರ್ಗೋ ಸರ್ವೀಸ್ ಹಾಗೂ ಸುಕ್ರಪ್ಪ ಮಾದೇವ ನಾಯ್ಕ ಅವರ ಎಸ್ ಎಂ ರೈಲ್ವೆ ಟ್ರಾನ್ಸಫರ್ ಎಂಬ ಹೆಸರಿನ ಪಾರ್ಸಲ್’ನ್ನು ಅವರು ಹಿಡಿದು ಅಧಿಕಾರಿಗಳ ಮುಂದೆ ಹಾಜರುಪಡಿಸುತ್ತಿದ್ದಾರೆ. ಮುಂಡಳ್ಳಿಯ ಸಚೀನ್ ನಾರಾಯಣ ನಾಯ್ಕ, ತಲಾಂದ ಹೊಸ್ಮನೆಯ ಮಾದೇವ ಈರಪ್ಪ ನಾಯ್ಕ, ಮುಟ್ಟಳ್ಳಿ ಬಗ್ಗಿಮನೆಯ ಕೃಷ್ಣ ಗೋವಿಂದ ನಾಯ್ಕ, ಮುಟ್ಟಳ್ಳಿ ನರ್ಸತ್ತಿಮನೆಯ ಗಣಪತಿ ನಾರಾಯಣ ನಾಯ್ಕ ಅವರು ಸಹ ಅಲ್ಲಿಯೇ ಹಮಾಲಿ ಕೆಲಸ ಮಾಡಿಕೊಂಡಿದ್ದು ಅವರೆಲ್ಲರೂ ಸೇರಿ ದೊಡ್ಡ ದೊಡ್ಡ ಪಾರ್ಸಲ್ ಇಳಿಸಿ ಅದನ್ನು ಕಮರ್ಶಿಯಲ್ ಅಧಿಕಾರಿಗಳಿಗೆ ಕೊಡುತ್ತಿದ್ದಾರೆ.
ಅದರಂತೆ, ಜುಲೈ 7ರಂದು ಪಂಚಗAಗಾ ಎಕ್ಸಪ್ರೆಸ್ ರೈಲಿನಲ್ಲಿ ಸ್ಟಾಂಡರ್ಡ ಕಾರ್ಗೋ ಸರ್ವೀಸ್ ಹೆಸರಿನಲ್ಲಿ ಪಾರ್ಸಲ್ ಬಂದಿದೆ. ಅದನ್ನು ಅಲ್ಲಿನ ಹಮಾಲಿಗಳಾದ ಗಣಪತಿ ನಾಯ್ಕ ಅವರ ಜೊತೆ ಮಾದೇವ ನಾಯ್ಕ, ಕೃಷ್ಣ ನಾಯ್ಕ ಸೇರಿ ಇಳಿಸಿದ್ದಾರೆ. ನಂತರ ಅದನ್ನು ಕಮರ್ಶಿಯಲ್ ಅಧಿಕಾರಿಗಳ ಬಳಿ ಒಯ್ಯುವ ಪ್ರಯತ್ನ ಮಾಡಿದ್ದಾರೆ. ಆಗ, ಅಲ್ಲಿಗೆ ಧಾವಿಸಿ ಬಂದ ಸ್ಟಾಂಡರ್ಡ ಕಾರ್ಗೋ ಸರ್ವೀಸ್ ನಡೆಸುವ ರಾಜೇಶ್ ನಾರಾಯಣ ನಾಯ್ಕ ಹಾಗೂ ಮುಂಡಳ್ಳಿ ಪಟೇಲ್ ಹೌಸ್’ನ ಸಚೀನ್ ನಾರಾಯಣ ನಾಯ್ಕ ಸೇರಿ ಅಡ್ಡಗಟ್ಟಿದ್ದಾರೆ. `ಆ ಪಾರ್ಸಲ್ ಅಧಿಕಾರಿಗಳಿಗೆ ಕೊಡಬೇಡಿ’ ಎಂದು ತಾಕೀತು ಮಾಡಿದ್ದಾರೆ. ಜೊತೆಗೆ ಗಣಪತಿ ನಾಯ್ಕ ಅವರನ್ನು ಹೊಡೆದು ಥಳಿಸಿದ್ದಾರೆ.
`ಇನ್ಮುಂದೆ ನೀವು ನಮ್ಮ ಪಾರ್ಸಲ್ ಮುಟ್ಟಬಾರದು. ಮುಟ್ಟಿದರೆ ಕೊಲೆ ಮಾಡುವೆ’ ಎಂದು ಬೆದರಿಸಿದ್ದಾರೆ. ನೋವು ಅನುಭವಿಸಿದ ಗಣಪತಿ ನಾಯ್ಕ ಅವರು ಈ ಎಲ್ಲಾ ವಿಷಯವನ್ನು ಪೊಲೀಸರ ಮುಂದೆ ಹೇಳಿದ್ದು, ದೂರು ದಾಖಲಿಸಿದ್ದಾರೆ. ಆ ಪಾರ್ಸಲ್ ಒಳಗೆ ಏನಿತ್ತು? ಅದನ್ನು ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದರಿಂದ ರಾಜೇಶ ನಾಯ್ಕ ಅವರಿಗೆ ಆಗುವ ಸಮಸ್ಯೆ ಏನು? ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.