ವಿಘ್ನ ನಿವಾರಕ ವಿನಾಯಕ ದೇವರ ನೈವೇದ್ಯಕ್ಕೆ ಬಳಸುವ `ಮೋದಕ’ ಎಂಬ ಹೆಸರಿನ ಸಿಹಿ ತಿನಿಸಿನೊಳಗೆ ಮಾದಕ ವಸ್ತು ಸೇರಿಸಿ ಮಾರಾಟ ಮಾಡುವ ಜಾಲ ಬೆಳಕಿಗೆ ಬಂದಿದೆ. ದಾಂಡೇಲಿ ಜಿ ಎನ್ ರಸ್ತೆಯಲ್ಲಿರುವ ಎಸ್ ಕೆ ಎಜನ್ಸಿ ಎಂಬ ಅಂಗಡಿಯಲ್ಲಿ ಮೋದಕದೊಳಗೆ ಮಾದಕ ವಸ್ತು ಸೇರಿಸಿ ಮಾರಾಟ ಮಾಡಲಾಗುತ್ತಿದೆ.
ದಾಂಡೇಲಿಯ ನಿರ್ಮಲನಗರದಲ್ಲಿ ಸಂಜಯ ಮುರುಳೀಧರ ಮಹೇಶ್ವರಿ ಅವರು ವಾಸವಾಗಿದ್ದಾರೆ. ಜಿ ಎನ್ ರಸ್ತೆಯಲ್ಲಿ ಅವರು ಕಿರಾಣಿ ಅಂಗಡಿ ನಡೆಸುತ್ತಿದ್ದು, ಆ ಅಂಗಡಿಯಲ್ಲಿಯೇ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಎಸ್ ಕೆ ಎಜನ್ಸಿ ಎಂಬ ಹೋಲ್‌ಸೆಲ್ ಅಂಗಡಿಯಲ್ಲಿ ಅವರು `ಮೋದಕ’ ಎಂಬ ಹೆಸರಿನ ಅಡಿ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದಾರೆ. ಮೋದಕ ಗಾತ್ರದ ಕಪ್ಪು ಬಣ್ಣದ ಉಂಡೆಗಳನ್ನು ಅವರು ಬಾಕ್ಸಿನೊಳಗೆ ತುಂಬಿ ಕೆಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ.
SANAN MEWA MODAK (SPECIAL) ಎಂಬ ಆಕರ್ಷಕ ಡಬ್ಬಿಯೊಳಗೆ ಸಿಹಿ ತಿನಿಸುಗಳಿದ್ದು, ಆ ತಿನಿಸುಗಳನ್ನು ತಪಾಸಣೆ ನಡೆಸಿದಾಗ ಅಲ್ಲಿ ನಿಷೇಧಿತ ಮಾದಕ ವಸ್ತು ಕಾಣಿಸಿದೆ. ಆ ಪ್ಯಾಕೇಟ್ ಮೇಲೆ ಗಾಂಜಾದ ಗಾಂಜಾದ ಸಸ್ಯಶಾಸ್ತ್ರೀಯ ಹೆಸರಾದ Annabis Sativaನ್ನು ನಮೂದಿಸಿ, ಮಾದಕ ವಸ್ತುಗಳು ಅಗತ್ಯವಿರುವವರನ್ನು ಗುರಿಯಾಗಿರಿಸಿಕೊಂಡು ಮಾರಾಟ ಮಾಡಿದ್ದಾರೆ. ದಾಂಡೇಲಿ PSI ಕಿರಣ ಪಾಟೀಲ ನೇತೃತ್ವದ ತಂಡಕ್ಕೆ ಈ ಸಿಹಿ ತಿನಿಸುವಿನ ಮೇಲೆ ಅನುಮಾನ ಬಂದಿದ್ದು, ಆ ಮಳಿಗೆ ಮೇಲೆ ದಿಢೀರ್ ದಾಳಿ ಮಾಡಿದ್ದಾರೆ. ಸೊಕೊ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಆ ಸಿಹಿ ಉತ್ಪನ್ನದ ಪರೀಕ್ಷೆ ಮಾಡಿಸಿದ್ದಾರೆ. ಆಗ, ಆ ಮೋದಕ ಕೇವಲ ಮೋದಕವಲ್ಲ. ಅದರೊಳಗೆ ಸಾಕಷ್ಟು ಪ್ರಮಾಣದಲ್ಲಿ ಮಾದಕವೂ ಸೇರಿದೆ ಎಂಬ ಅಂಶ ಬಯಲಿಗೆ ಬಂದಿದೆ. ಮನುಷ್ಯನ ಮೆದುಳನ್ನೇ ಮರಗೆಟ್ಟುವ ಹಾಗೇ ಮಾಡುವ ಮಾದಕ ಅಂಶಗಳು ಆ ಮೋದಕದಲ್ಲಿ ಸಿಕ್ಕಿದೆ.
ಆ ಮಳಿಗೆ ತಪಾಸಣೆ ಮಾಡಿದಾಗ ಒಟ್ಟು 10 ಬಾಕ್ಸ್ ಮೋದಕದ ಸಿಹಿ ಪೆಟ್ಟಿಗೆ ಸಿಕ್ಕಿದೆ. ಒಂದುವರೆ ಕೆಜಿಗೂ ಅಧಿಕ ತೂಕದ ಮಾದಕ ವ್ಯಸನವನ್ನು ಪೊಲೀಸರು ಜಪ್ತು ಮಾಡಿ, ಕೇಸು ದಾಖಲಿಸಿದ್ದಾರೆ.