ಮೋಜು-ಮಸ್ತಿಗಾಗಿ ದಾಂಡೇಲಿಗೆ ಬಂದಿದ್ದ ಪ್ರವಾಸಿಗ ಕುಬೇರ್ ಸುರಪುರ ಅವರು ಸಾಹಸ ಚಟುವಟಿಕೆಗೆ ತೆರಳಿದ್ದು, ರೆಸಾರ್ಟ ಮಾಲಕರ ನಿರ್ಲಕ್ಷದಿಂದ ಅವರು ನೋವು ಅನುಭವಿಸಿದ್ದಾರೆ. ಜಿಪ್‌ಲೈನ್ ಚಟುವಟಿಕೆ ಮಾಡುವ ವೇಳೆ ಹಗ್ಗ ತುಂಡಾಗಿ 40 ಅಡಿ ಆಳಕ್ಕೆ ಅವರು ಬಿದ್ದಿದ್ದಾರೆ.
ವಿಜಯಪುರದ ಗ್ಯಾಂಗವಾಡಿ ಕುಬೇರ ರಮೇಶ ಸುರಪುರ (40) ಅವರು ಜುಲೈ 3ರಂದು ದಾಂಡೇಲಿಗೆ ಬಂದಿದ್ದರು. ಅವರು ಇಲ್ಲಿ ಸ್ಟಾರ್ಲಿಂಗ್ ರೆಸಾರ್ಟಗೆ ಹೋಗಿ ರೂಂ ಮಾಡಿದ್ದರು. ಅಲ್ಲಿಯೇ ಅವರು ವಿವಿಧ ಮೋಜು-ಮಸ್ತಿಯ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ರೆಸಾರ್ಟ ಮಾಲಕರಾದ ಉಸ್ಮಾನ ವಹಾಬ್, ರಾಘವೇಂದ್ರ ಶೆಟ್ಟಿ ಹಾಗೂ ಪವನ ಅವರು ಜಿಪ್‌ಲೈನ್ ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ್ದರು. ಅದರಂತೆ, ಆ ಸಾಹಸ ಚಟುವಟಿಕೆಗೆ ಹೋದಾಗ ಪ್ರವಾಸಿಗನ ಸೊಂಟಕ್ಕೆ ಕಟ್ಟಿದ್ದ ಸುರಕ್ಷತಾ ಬೆಲ್ಟ್ ಏಕಾಏಕಿ ಹರಿದಿದ್ದು, ಅವರು ಸುಮಾರು 40 ಅಡಿ ಕೆಳಗೆ ನೆಲಕ್ಕೆ ಬಿದ್ದಿದ್ದಾರೆ.
ಬಿದ್ದ ರಭಸಕ್ಕೆ ಕುಬೇರ ಸುರಪುರ ಅವರ ಎರಡೂ ಕೈಗಳು ಹಾಗೂ ಕಾಲುಗಳಿಗೆ ತೀವ್ರ ಸ್ವರೂಪದ ಮುರಿತದ ಗಾಯಗಳಾಗಿದೆ. ಹೆಲ್ಮೆಟ್ ಹಾರಿ ಹೋಗಿ ಗುತ್ತಿಗೆಗೆ ಗಾಯವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಹಾಗೂ ಮಿರಜ್ ಆಸ್ಪತ್ರೆ ಕರೆದೊತ್ತಲಾಗಿದೆ. ಸಾಹಸ ಕ್ರೀಡೆಗೆ ಬಳಸುವ ಯಂತ್ರೋಪಕರಣಗಳನ್ನು ಸರಿಯಾಗಿ ನಿರ್ವಹಿಸದಿರುವುದು ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದ ಕಾರಣ ಈ ಅವಘಡ ನಡೆದ ಬಗ್ಗೆ ದೂರು ದಾಖಲಾಗಿದೆ.