ಯಲ್ಲಾಪುರ-ಶಿರಸಿ-ಸಿದ್ದಾಪುರದಿಂದ ಸಿಗಂದೂರು ಹಾಗೂ ಜೋಗ ಜಲಪಾತ ವೀಕ್ಷಣೆ ಮಾಡಲು ಬಯಸುವವರಿಗೆ KSRTC ಒಂದು ದಿನದ ಪ್ರವಾಸಿ ಪ್ಯಾಕೇಜ್ ಶುರು ಮಾಡಿದೆ. ಪ್ರತಿ ಭಾನುವಾರ ಯಲ್ಲಾಪುರದಿಂದ ವಿಶೇಷ ಬಸ್ ಸಂಚಾರ ಶುರುವಾಗಿದೆ.
ಯಲ್ಲಾಪುರ KSRTC ಘಟಕದಿಂದ ಕಳೆದ ವರ್ಷ ಸಿಗಂದೂರು-ಜೋಗ ಪ್ರವಾಸಕ್ಕೆ ವಿಶೇಷ ಬಸ್ ಸೌಕರ್ಯ ಒದಗಿಸಲಾಗಿತ್ತು. ಎರಡು ತಿಂಗಳು ಸಂಚರಿಸಿದ ಈ ಪ್ರವಾಸಿ ಬಸ್ ನಂತರ ಪ್ರಯಾಣಿಕರ ಕೊರತೆ ಅನುಭವಿಸಿತು. ಪ್ರಚಾರದ ಕೊರತೆಯಿಂದ ಈ ಮಾರ್ಗದ ಬಸ್ ಸಂಚಾರ ಸ್ಥಗಿತಗೊಂಡಿತು. ಸದ್ಯ ಮತ್ತೆ ಮಳೆಗಾಲ ಶುರುವಾಗಿದ್ದು, ಜೋಗ ಜಲಪಾತದ ಸೌಂದರ್ಯ ಇಮ್ಮಡಿಯಾಗಿದೆ. ಸಿಗಂದೂರು ಚೌಡೇಶ್ವರಿ ದೇವಿ ದರ್ಶನಕ್ಕೂ ಈ ಅವಧಿ ಸೂಕ್ತವಾಗಿದೆ. ಈ ಹಿನ್ನಲೆ ಯಲ್ಲಾಪುರ ಕೆಎಸ್‌ಆರ್‌ಟಿಸಿ ಘಟಕದಿಂದ ಮತ್ತೆ ವಿಶೇಷ ಪ್ರವಾಸಿ ಬಸ್ ಶುರು ಮಾಡಲಾಗಿದೆ. ಪ್ರತಿ ಭಾನುವಾರ ಬೆಳಗ್ಗೆ 7 ಗಂಟೆಗೆ ಯಲ್ಲಾಪುರ ಬಸ್ ನಿಲ್ದಾಣದಿಂದ ಈ ಬಸ್ ಶಿರಸಿ ಮಾರ್ಗವಾಗಿ ಸಂಚರಿಸಲಿದೆ. ಶಿರಸಿಯಲ್ಲಿ ಲಘು ಉಪಹಾರಕ್ಕೆ ಸಮಯ ಮೀಸಲಿಡಲಿದ್ದು, ಅದಾದ ನಂತರ 8.15ಕ್ಕೆ ಶಿರಸಿಯಿಂದ ಸಿದ್ದಾಪುರ ಮಾರ್ಗವಾಗಿ ಸಿಗಂದೂರಿಗೆ ತಲುಪಲಿದೆ. ಸಿದ್ದಾಪುರದ ಪ್ರಯಾಣಿಕರಿಗಾಗಿ ಈ ಬಸ್ಸು 9 ಗಂಟೆಗೆ ಕಾಯಲಿದೆ. ಅದಾದ ನಂತರ ಪ್ರವಾಸಿಗರನ್ನು ಹೊತ್ತ ಈ ಬಸ್ಸು ನೂತನವಾಗಿ ನಿರ್ಮಿಸಲಾದ ಸಿಗಂದೂರು ಸೇತುವೆ ವೀಕ್ಷಣೆ ಸ್ಥಳದತ್ತ ಸಂಚರಿಸಲಿದೆ. ಅಲ್ಲಿಂದ ಮುಂದೆ ಸಿಗಂದೂರು ಚೌಡೇಶ್ವರಿ ದೇವಿ ದರ್ಶನಕ್ಕೆ ಸಮಯ ಮೀಸಲಿಡಲಾಗುತ್ತದೆ. ಅದಾದ ನಂತರ ಸಿಗಂದೂರು ದೇಗಲದಲ್ಲಿ ನಡೆಯುವ ಅನ್ನ ಸಂತರ್ಪಣೆಯಲ್ಲಿ ಭಾಗಿಯಾಗಲು ಭಕ್ತರಿಗೆ ಸಾಕಷ್ಟು ಸಮಯ ಸಿಗಲಿದೆ.
ಮಧ್ಯಾಹ್ನ 1 ಗಂಟೆಗೆ ಬಸ್ಸು ಸಿಗಂದೂರು ತಲುಪಲಿದ್ದು, ಭೋಜನದ ನಂತರ ಈ ವಿಶೇಷ ಸಾರಿಗೆ 2.30ಕ್ಕೆ ಜೋಗ ಜಲಪಾತಕ್ಕೆ ಬರಲಿದೆ. ಎರಡು ತಾಸುಗಳ ಕಾಲ ಜೋಗ ಜಲಪಾತದ ಸೌಂದರ್ಯ ಸವಿಯಲು ಪ್ರವಾಸಿಗರಿಗೆ ಸಮಯ ಸಿಗಲಿದೆ. ಸಂಜೆ 4.30ಕ್ಕೆ ಮತ್ತೆ ಸಿದ್ದಾಪುರ ಮಾರ್ಗವಾಗಿ ಈ ಬಸ್ಸು ಶಿರಸಿಗೆ ಬಂದು ಅಲ್ಲಿಂದ ಯಲ್ಲಾಪುರಕ್ಕೆ ಮರಳಲಿದೆ. ಸಂಜೆ 5.45ಕ್ಕೆ ಬಸ್ಸು ಶಿರಸಿ ಬಸ್ ನಿಲ್ದಾಣ ಪ್ರವೇಶಿಸಲಿದ್ದು, 7 ಗಂಟೆಗೆ ಯಲ್ಲಾಪುರವನ್ನು ತಲುಪಲಿದೆ. ಯಲ್ಲಾಪುರದಿಂದ ಸಿಗಂದೂರು ಹಾಗೂ ಜೋಗ ಪ್ರವಾಸ ಮಾಡುವವರಿಗೆ ಕೆಎಸ್‌ಆರ್‌ಟಿಸಿ 400ರೂ ಹಾಗೂ ಶಿರಸಿಯಿಂದ ಈ ಪ್ರವಾಸ ಮಾಡುವವರಿಗೆ 350ರೂ ಟಿಕೆಟ್ ದರವಿದೆ. ಪ್ರವಾಸಿ ಪ್ಯಾಕೇಜ್ ಅಡಿ ಬಿಡುವ ವಿಶೇಷ ಬಸ್ ಇದಾಗಿದ್ದರಿಂದ ಶಕ್ತಿ ಯೋಜನೆಯ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಈ ಭಾನುವಾರ ನಿಮ್ಮ ಪ್ಲಾನ್ ಏನು? ಏನೂ ಇಲ್ಲ ಎಂದಾದರೆ ಈಗಲೇ ಈ ಪ್ರವಾಸಕ್ಕೆ ಪ್ಲಾನ್ ಮಾಡಿ.. ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ಈ ಪ್ರವಾಸಕ್ಕೆ ಬನ್ನಿ.. ಈ ವಾರ ಮಿಸ್ ಆದವರೂ ಮುಂದಿನವಾರ ತಪ್ಪಿಸಲೇ ಬೇಡಿ.
ಇನ್ನೂ ಏನಾದರೂ ಮಾಹಿತಿ ಬೇಕೇ? ಹಾಗಾದರೆ, ಇಲ್ಲಿ ಫೋನ್ ಮಾಡಿ 7760991702, 7760991713, 8762721591 ಹಾಗೂ 7676412996