ಕಾರಾಗೃಹದಲ್ಲಿರುವ ಕೈದಿಗಳನ್ನು ಭೇಟಿಯಾಗಲು ಬರುವವರ ಬಗ್ಗೆ ಇ-ಪ್ರಿನ್ಸಸ್ ತಂತ್ರಾoಶದಲ್ಲಿ ದಾಖಲಿಸಬೇಕಿದ್ದು, ಆ ತಂತ್ರಾoಶದಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಹಳಿಯಾಳದಲ್ಲಿ ಹಗರಣವೊಂದು ಹೊರಬಿದ್ದಿದೆ. ತೆಂಗಿನ ಎಣ್ಣೆ ಡಬ್ಬಿಯಲ್ಲಿ ತಂಬಾಕು ಸಾಗಿಸುತ್ತಿದ್ದ ಮಹಿಳೆಯೊಬ್ಬರು ಕಾರಾಗೃಹ ಅಧಿಕಾರಿಗಳ ಬಳಿ ಸಿಕ್ಕಿ ಬಿದ್ದಿದ್ದಾರೆ.
ರಾಜಕುಮಾರ ದೊಡ್ಡಮನಿ ಎಂಬಾತರು ಹಳಿಯಾಳ ಉಪಕಾರಾಗೃಹದಲ್ಲಿ ಅಧೀಕ್ಷಕರಾಗಿದ್ದಾರೆ. ಕಾರಾಗೃಹಕ್ಕೆ ಬಂದು ಕೈದಿಗಳನ್ನು ಭೇಟಿ ಮಾಡುವವರ ಮೇಲೆ ಅವರು ಕಣ್ಣಿಟ್ಟಿದ್ದಾರೆ. ಆದರೆ, ಅವರ ಕಣ್ತಪ್ಪಿಸಿ ಕೆಲವರು ನಿಷೇಧಿತ ವಸ್ತುಗಳನ್ನು ಜೈಲಿನ ಒಳಗೆ ಸರಬರಾಜು ಮಾಡುತ್ತಿದ್ದಾರೆ. ಜುಲೈ 14ರಂದು ಸಹ ಮಂಜುಳಾ ಕಿರನ್ನವರ್ ಎಂಬಾತರು ಕಾರಾಗೃಹದೊಳಗೆ ನಿಷೇಧಿಸಲಾದ ತಂಬಾಕು ಪುಡಿ ಸಾಗಾಟ ಪ್ರಯತ್ನ ಮಾಡಿದ್ದು, ಅದನ್ನು ಅಲ್ಲಿನ ಸಿಬ್ಬಂದಿ ತಡೆದಿದ್ದಾರೆ.
ಪ್ರತಿ ಸಲ ಕಾರಾಗೃಹಕ್ಕೆ ಭೇಟಿ ನೀಡುವವರನ್ನು ಅಲ್ಲಿನ ತಂತ್ರಾoಶದ ಮೂಲಕ ತಪಾಸಣೆ ಮಾಡಲಾಗುತ್ತದೆ. ಭೇಟಿ ನೀಡಿದವರ ವಿವರವನ್ನು ಸಹ ಇ-ಪ್ರಿನ್ಸಸ್ ತಂತ್ರಾAಶದಲ್ಲಿ ದಾಖಲಿಸಲಾಗುತ್ತದೆ. ಆದರೆ, ಜುಲೈ 14ರಂದು ಈ ತಂತ್ರಾoಶ ಹಾಳಾಗಿದ್ದು, ಕಾರಾಗೃಹದ ಸಿಬ್ಬಂದಿ ತಂತ್ರಾAಶ ಇಲ್ಲದೇ ಆಗಮಿಸಿದವರನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ವಿಚಾರಣಾಧೀನ ಖೈದಿ ಶ್ರೀಕಾಂತ ರಾಜಶೇಖರ ಕಿರನ್ನವರ್ ಅವರನ್ನು ಭೇಟಿಯಾಗಲು ಬಂದಿದ್ದ ಅವರ ತಾಯಿ ಮಂಜುಳಾ ಕಿರನ್ನವರ್ ಅವರ ಬಳಿ ತಂಬಾಕಿನ ಪುಡಿ ಸಿಕ್ಕಿದೆ.
ಮಂಜುಳಾ ಕಿರನ್ನವರ್ ಅವರು ತಮ್ಮ ಮಗನಿಗೆ ಬೇಕರಿಯಿಂದ ತಿಂಡಿ ತಂದಿರುವುದಾಗಿ ಹೇಳಿದ್ದಾರೆ. ಬಂಧಿಗಳ ಸಂದರ್ಶಕ ಪುಸ್ತಕದಲ್ಲಿ ಅವರ ಹೆಸರು ಬರೆದ ನಂತರ ಕಾರಾಗೃಹ ಸಿಬ್ಬಂದಿ ಸಂದೀಪ ಮಂಜುನಾಥ ನಾಯ್ಕ ಅವರು ತಪಾಸಣೆ ಶುರು ಮಾಡಿದ್ದಾರೆ. ಆಗ, ನೀಲಿ ಬಣ್ಣದ ಡಾಬರ್ ಕಂಪನಿಯ ಅನ್ಮೋಲ್ ತೆಂಗಿನ ಎಣ್ಣೆಯ ಡಬ್ಬಿಯಲ್ಲಿ 25 ಗ್ರಾಂ ತಂಬಾಕು ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ. ಸಂದೀಪ ನಾಯ್ಕ ಅವರು ಕೂಡಲೇ ಈ ವಿಷಯವನ್ನು ಮೇಲಧಿಕಾರಿಗಳಿಗೆ ಹೇಳಿದ್ದು, ರಾಜಕುಮಾರ ದೊಡ್ಡಮನಿ ಅವರು ತಾಯಿ-ಮಗನ ವಿರುದ್ಧ ಮತ್ತೊಂದು ಕೇಸು ದಾಖಲಿಸಿದ್ದಾರೆ.