`ನೀನೇ ಬೇಕು’ ಎಂದು ಎಂದು ಪ್ರೀತಿಸಿ ಮದುವೆಯಾದ ಶಶಾಂಕ ನಾಯ್ಕ ಅವರು ಅಶ್ವಿನಿ ನಾಯ್ಕ ಅವರನ್ನು ದೂರ ಮಾಡಿದ್ದು, ಸದ್ಯ ಅಶ್ವಿನಿ ಅವರ ಅತ್ತೆ ಭಾರತಿ ನಾಯ್ಕ ಅವರು ಸಹ ಸೊಸೆಗೆ ಹೊಡೆದು ಮನೆಯಿಂದ ಹೊರ ಹಾಕಿದ್ದಾರೆ. ಅನ್ಯಾಯಕ್ಕೆ ಒಳಗಾದ ಅಶ್ವಿನಿ ನಾಯ್ಕ ಅವರು ಕಠಿಣ ಕ್ರಮಕ್ಕಾಗಿ ಪೊಲೀಸರ ಮೊರೆ ಹೋಗಿದ್ದು, ನ್ಯಾಯಕ್ಕಾಗಿ ಮಾಧ್ಯಮದವರಿಗೂ ಮನವಿ ಮಾಡಿದ್ದಾರೆ.
ಬೆಂಗಳೂರಿನ ಜೆಪಿ ನಗರದ ಸಾಲಕ್ಕಿ ಸಿಂಗಲ್ ಪಿಜಿ ಬಳಿಯ ಸಾವಂತಿ ಅಪಾರ್ಟಮೆಂಟಿನಲ್ಲಿ ಅಶ್ವಿನಿ ನಾಯ್ಕ ಅವರು ವಾಸವಾಗಿದ್ದರು. ಉದ್ಯೋಗಕ್ಕಾಗಿ ಅವರು ಗೋಕರ್ಣಕ್ಕೆ ಬಂದಿದ್ದು, ಇಲ್ಲಿಯೇ ಅವರಿಗೆ ಹನೇಹಳ್ಳಿಯ ಶಶಾಂಕ ವಿನೋದ ನಾಯ್ಕ ಅವರು ಪರಿಚಯವಾದರು. 25 ವರ್ಷದ ಅಶ್ವಿನಿ ನಾಯ್ಕ ಅವರು 30 ವರ್ಷದ ಶಶಾಂಕ ಅವರನ್ನು ಪ್ರೀತಿಸಿದ್ದು, ಅವರಿಬ್ಬರು 2024ರಲ್ಲಿ ಮದುವೆಯನ್ನು ಆದರು. ಮದುವೆ ನಂತರ ಈ ದಂಪತಿ ಗೋವಾಗೆ ಹೋದರು. ಗೋವಾದ ಕೋಲ್ವಾಗೆ ಹೋಗಿ ಅಲ್ಲಿನ ಅಕ್ವಾಮೆರಿನೋ ಅಪಾರ್ಟಮೆಂಟಿನಲ್ಲಿ ಅವರಿಬ್ಬರು ಸಂಸಾರ ಶುರು ಮಾಡಿದರು. ಮದುವೆ ಆದ ಹೊಸತರಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕ್ರಮೇಣ ಅವರ ದಾಂಪತ್ಯದಲ್ಲಿ ಬಿರುಕು ಮೂಡಿತು.
ಅಶ್ವಿನಿ ನಾಯ್ಕ ಅವರ ಬಳಿ ದುಡಿಮೆಯ ಹಣವಿತ್ತು. ಆ ಬಗ್ಗೆ ಅರಿತಿದ್ದ ಶಶಾಂಕ ನಾಯ್ಕ ಅವರು `ತಂಗಿ ಮದುವೆಗಾಗಿ 2 ಕೋಟಿ ಕೊಡು’ ಎಂದು ಕೇಳಿದ್ದರು. ಆದರೆ, ಅಶ್ವಿನಿ ನಾಯ್ಕ ಅವರಿಗೆ ಹಣ ಕೊಡುವ ಮನಸ್ಸಿರಲಿಲ್ಲ. ಹೀಗಾಗಿ ಹಣ ಕೊಡಲು ನಿರಾಕರಿಸಿದ್ದರು. ಈ ವೇಳೆ ಅಶ್ವಿನಿ ನಾಯ್ಕ ಅವರ ಬಳಿಯಿದ್ದ ಒಡವೆಯನ್ನು ಬ್ಯಾಂಕಿನಲ್ಲಿ ಭದ್ರವಾಗಿರಿಸುವುದಾಗಿ ನಂಬಿಸಿದ ಶಶಾಂಕ ನಾಯ್ಕ ಅವರು ಆ ಚಿನ್ನದ ಒಡವೆಪಡೆದು ಅದನ್ನು ದುರುಪಯೋಗ ಮಾಡಿದ್ದರು. ಇದೇ ವಿಷಯವಾಗಿ ಅವರಿಬ್ಬರ ನಡುವೆ ವೈಮನಸ್ಸು ಮೂಡಿದ್ದು, ಅಶ್ವಿನಿ ನಾಯ್ಕ ಅವರು ಮಾತನಾಡಿದಾಗಲೆಲ್ಲ ಶಶಾಂಕ ನಾಯ್ಕ ಅವರು ಹೊಡೆಯುವುದು-ಬಡಿಯುವುದು ಶುರು ಮಾಡಿದರು.
ಈ ಬಗ್ಗೆ 2026ರ ಜುಲೈ 5ರಂದು ಅಶ್ವಿನಿ ನಾಯ್ಕ ಅವರು ಕೋಲ್ವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ತಮಗಾದ ಅನ್ಯಾಯಕ್ಕೆ ನ್ಯಾ ಕೊಡಿಸಿ ಎಂದು ಮನವಿ ಮಾಡಿದರು. ಇದರಿಂದ ಸಿಟ್ಟಾದ ಶಶಾಂಕ ನಾಯ್ಕ ಅವರು ಮನೆಯಲ್ಲಿದ್ದ ಗ್ಯಾಸ್ ಸಿಲೆಂಡರ್ ಸೋರಿಕೆ ಮಾಡಿ ಅಶ್ವಿನಿ ನಾಯ್ಕ ಅವರನ್ನು ಕೊಲ್ಲುವ ಪ್ರಯತ್ನ ನಡೆಸಿದರು. ಸಾವಿನ ದವಡೆಯಿಂದ ಪಾರಾದ ಅಶ್ವಿನಿ ನಾಯ್ಕ ಅವರು ಅಲ್ಲಿಂದ ತಪ್ಪಿಸಿಕೊಂಡು ಮತ್ತೆ ಗೋಕರ್ಣಕ್ಕೆ ಬಂದರು. ಸೊಸೆ ಮನೆಗೆ ಬಂದಿರುವುದನ್ನು ನೋಡಿದ ಭಾರತಿ ವಿನೋದ ನಾಯ್ಕ ಅವರು ಅಶ್ವಿನಿ ನಾಯ್ಕ ಅವರನ್ನು ಮನೆಯಿಂದ ಹೊರದಬ್ಬಿದರು. ಗೋವಾದ ಎನ್ಜಿಓವೊಂದರ ತಾರಾ ಕೇರ್ಕರ್ ಹಾಗೂ ಮತ್ತೊಬ್ಬ ಮಹಿಳೆಯನ್ನು ಕರೆದು ದಬ್ಬಾಳಿಕೆ ನಡೆಸಿದರು.
ಗೋವಾದಲ್ಲಿ ಗಂಡನ ಕಾಟ ಹಾಗೂ ಗೋಕರ್ಣದಲ್ಲಿ ಅತ್ತೆಯ ಪಿಕಲಾಟ ನೋಡಿದ ಅಶ್ವಿನಿ ನಾಯ್ಕ ಅವರು ನೆರವು ಕೋರಿ ಮಾಧ್ಯಮದ ಮುಂದೆ ಬಂದರು. ಗೋಕರ್ಣದಲ್ಲಿಯೂ ಪೊಲೀಸ್ ದೂರು ದಾಖಲಿಸಿದ ಅವರು ತಮಗಾದ ಅನ್ಯಾಯದ ವಿಡಿಯೋವೊಂದನ್ನು ಮಾಡಿ ಹರಿಬಿಟ್ಟರು. `ನನ್ನ ಚಿನ್ನ ನನಗೆ ಒಪ್ಪಿಸಿ’ ಎಂದವರು ಕೇಳಿಕೊಂಡಿದ್ದು, ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದರು.