ಕಾರು ಚಾಲಕನಿಗೆ ಫೋನ್ ಮಾಡಿ ಬೆದರಿಸಿದ ವಿಷಯವಾಗಿ ಮೊಬೈಲ್ ಮಿಡಿಯಾ ನೆಟ್ ವರ್ಕ ಪ್ರಕಟಿಸಿದ ವರದಿಗೆ ಪೊಲೀಸ್ ಸಿಬ್ಬಂದಿ ಪ್ರಸಾದ ತಲಗೇರಿ ಅವರು ಫೋನ್ ಮಾಡಿ ಸ್ಪಷ್ಠೀಕರಣ ನೀಡಿದ್ದಾರೆ. `ವೇಗವಾಗಿ ಬಂದ ಕಾರು ತಮ್ಮ ಸಮೀಪದಿಂದ ಸಾಗಿದ್ದು, ಕಾರು ಚಾಲಕನಿಗೆ ಈ ಬಗ್ಗೆ ವಿಚಾರಿಸಲು ಫೋನ್ ಮಾಡಿದ್ದೆ’ ಎಂದವರು ಹೇಳಿಕೊಂಡಿದ್ದಾರೆ.
`ಕರ್ತವ್ಯಕ್ಕೆ ತೆರಳುವುದಕ್ಕಾಗಿ ನಾನು ಅವರ್ಸಾ ಬಳಿ ನಿಂತಿದ್ದು, ಬಸ್ಸಿಗಾಗಿ ಕಾಯುತ್ತಿದ್ದೆ. ಈ ವೇಳೆ ಕಾರೊಂದು ವೇಗವಾಗಿ ಮುನ್ನುಗ್ಗಿ ಬಂದಿದ್ದು, ತನಗೆ ಡಿಕ್ಕಿ ಹೊಡೆಯುವಷ್ಟು ಸಮೀಪದಿಂದ ಸಾಗಿತು. ಅಷ್ಟು ವೇಗವಾಗಿ ಬಂದ ಕಾರಿನ ಬಗ್ಗೆ ವಿಚಾರಿಸಲು ಕೈ ಮಾಡಿದೆ’ ಎಂದವರು ಹೇಳಿದ್ದಾರೆ. `ಈ ವೇಳೆ ತಾನು ಪೊಲೀಸ್ ಸಮವಸ್ತದಲ್ಲಿದ್ದು, ನಿಧಾನವಾಗಿ ಕಾರು ಓಡಿಸಿ ಎಂದು ಸೂಚಿಸುವುದಕ್ಕಾಗಿ ಕೈ ಮಾಡಿದ್ದೇನೆ. ಆದರೆ, ಅವರು ಕಾರು ನಿಲ್ಲಿಸಲಿಲ್ಲ. ಹೀಗಾಗಿ ಕಾರು ಮಾಲಕರ ಫೋನ್ ನಂ ಸಂಗ್ರಹಿಸಿ, ಫೋನ್ ಮಾಡಿ ಬುದ್ದಿ ಹೇಳಿದ್ದೇನೆ’ ಎಂದವರು ವಿವರಿಸಿದ್ದಾರೆ.
`ಮೈಮೇಲೆ ಮುನ್ನುಗ್ಗಿ ಬರುವ ಹಾಗೇ ಕಾರು ಓಡಿಸಬೇಡಿ ಎಂದಿದ್ದೇನೆ’ ಎಂದು ಪೊಲೀಸ್ ಸಿಬ್ಬಂದಿ ಪ್ರಸಾದ ತಲಗೇರಿ ಅವರು ಹೇಳಿದ್ದಾರೆ. `ಕೈ ಮಾಡಿದರೂ ಏಕೆ ಕಾರು ನಿಲ್ಲಿಸಿಲ್ಲ? ಎಂದು ಪ್ರಶ್ನಿಸಿದ್ದು ನಿಜ. ಆದರೆ, ನೀವು ಕೈ ಮಾಡಿದಾಗ ನಾವು ಏಕೆ ಕಾರು ನಿಲ್ಲಿಸಬೇಕು? ಎಂದು ಅವರು ಮರು ಪ್ರಶ್ನೆ ಹಾಕಿದ್ದಾರೆ. ಆ ವೇಳೆಯಲ್ಲಿಯೂ ತಾನು ಅವರನ್ನು ಬೆದರಿಸಿಲ್ಲ. ಅದಾಗಿಯೂ, ತಮ್ಮ ವಿರುದ್ಧ ದೂರು ನೀಡಿದ್ದಾರೆ’ ಎಂದವರು ಸ್ಪಷ್ಠಪಡಿಸಿದ್ದಾರೆ.