ಮಕ್ಕಳಾಗದ ಕಾರಣ ಕೊರಗುತ್ತಿದ್ದ ಶಿರಸಿ ರಾಜೀವ ನಗರದ ಸುಚೇತ್ರಾ ನಾಯ್ಕ ಅವರು ತಮ್ಮ ಅಕ್ಕನ ಮಗನಿಗೆ ವಿಷ ಉಣಿಸಿದ್ದಾರೆ. ಬಾಯಿಂದ ನೊರೆ ಕಾರಿಕೊಂಡ ಒಂದು ತಿಂಗಳ ಮಗು ಸಾವು-ಬದುಕಿನ ನಡುವೆ ಹೋರಾಟ ನಡೆಸಿದೆ.
ಶಿರಸಿ ಗಣೇಶನಗರ ಪುಟ್ಟನಮನೆಯ ಬಾಪೂಜಿ ಮಹಾದೇವ ಹುಬ್ಬಳ್ಳಿ ಅವರು ಸದ್ಯ ಶಿರಸಿಯ ರಾಜೀವ ನಗರದಲ್ಲಿ ವಾಸವಾಗಿದ್ದಾರೆ. ಸೆಕ್ಯುರಿಟಿ ಗಾರ್ಡ ಆಗಿ ಅವರು ಕೆಲಸ ಮಾಡಿಕೊಂಡಿದ್ದಾರೆ. ಅವರು ಶಿರಸಿ ರಾಜೀವ ನಗರದ ಚೇತನ ಅವರನ್ನು ಮದುವೆ ಆಗಿದ್ದು, ಮೇ 28ರಂದು ಅವರಿಗೆ ಗಂಡು ಮಗು ಜನಿಸಿದೆ.
ಚೇತನ ಅವರು ಗರ್ಭಿಣಿಯಾಗಿದ್ದಾಗ ತವರು ಮನೆಗೆ ಹೋಗಿದ್ದರು. ರಾಜೀವ ನಗರದಲ್ಲಿರುವ ಆ ತವರು ಮನೆಯಲ್ಲಿ ಬಾಪೂಜಿ ಅವರ ಮಾವ ನಾಗೇಂದ್ರ ನಾಯ್ಕ, ಅತ್ತೆ ಮಾದೇವಿ ನಾಯ್ಕ, ಭಾವ ಯತಿನ್ ನಾಯ್ಕ ಹಾಗೂ ಬಾವನ ಪತ್ನಿ ಸುಚಿತ್ರಾ ನಾಯ್ಕ ಅವರು ವಾಸವಾಗಿದ್ದರು. ಸುಚಿತ್ರಾ ನಾಯ್ಕ ಅವರು ಗರ್ಭಿಣಿಯಾದಾಗ ಅವರ ಮಗು ಹೊಟ್ಟೆಯಲ್ಲಿಯೇ ಸಾವನಪ್ಪಿದ್ದು, ಮಕ್ಕಳಿಲ್ಲದ ಕಾರಣ ಸುಚಿತ್ರಾ ನಾಯ್ಕ ಅವರು ಬೇಸರದಲ್ಲಿದ್ದರು. ಚೇತನ ನಾಯ್ಕ ಅವರಿಗೆ ಗಂಡು ಮಗು ಆದಾಗ `ನಿನಗೆ ಗಂಡು ಮಗು ಆಯಿತು. ನನಗೆ ಮಕ್ಕಳೇ ಆಗಲಿಲ್ಲ’ ಎಂದು ಹೊಟ್ಟೆಕಿಚ್ಚಿನಿಂದ ಹೇಳಿದ್ದರು.
ಈ ಎಲ್ಲದರ ನಡುವೆ ಜುಲೈ 4ರಂದು ಬಾಪೂಜಿ ಹುಬ್ಬಳ್ಳಿ ಹಾಗೂ ಅವರ ಪತ್ನಿ ಚೇತನ ಅವರು ಮತದಾರರ ಚೀಟಿ ಅಪ್ಟೇಡ್ ಮಾಡಲು ನಿರ್ಧರಿಸಿದ್ದರು. ಆ ಕೆಲಸಕ್ಕಾಗಿ ಅವರು ಶಿರಸಿ ಪೇಟೆಗೆ ಹೊರಟಿದ್ದು, ತಮ್ಮ ಮಗುವನ್ನು ಚೇತನ ಅವರ ತವರು ಮನೆಯಲ್ಲಿ ಬಿಟ್ಟಿದ್ದರು. ಚೇತನ ಅವರು ಅಕ್ಕ ಸುಚೇತ್ರಾ ನಾಯ್ಕ ಅವರ ಬಳಿ ಮಗು ನೋಡಿಕೊಳ್ಳುವಂತೆ ಮನವಿ ಮಾಡಿದ್ದರು. ಆ ದಿನ ಮಧ್ಯಾಹ್ನ 1 ಗಂಟೆಗೆ ಅವರು ಶಿರಸಿ ಪೇಟೆಗೆ ಹೋಗಿದ್ದು, 2 ಗಂಟೆಗೆ ಮಾವ ನಾಗೇಂದ್ರ ಅವರು ಫೋನ್ ಮಾಡಿದರು.
`ಮಗುವಿನ ಬಾಯಿಂದ ಕೆಟ್ಟ ವಾಸನೆ ಬರುತ್ತಿದೆ. ಜೊತೆಗೆ ಮಗು ನೊರೆ ಉಗುಳುತ್ತಿದೆ’ ಎಂದು ನಾಗೇಂದ್ರ ಅವರು ಹೇಳಿದರು. ತಕ್ಷಣ ಚೇತನ ಹಾಗೂ ಬಾಪೂಜಿ ದಂಪತಿ ಮನೆಗೆ ದೌಡಾಯಿಸಿದರು. ಮಗು ಅಸ್ವಸ್ಥವಾಗಿತ್ತು. ಗಂಡು ಮಗು ಜನಿಸಿದ ಕಾರಣ ಹೊಟ್ಟೆಕಿಚ್ಚಿನಿಂದ ಇದ್ದ ಸುಚಿತ್ರಾ ನಾಯ್ಕ ಅವರೇ ಆ ಮಗುವನ್ನು ಕೊಲ್ಲುವ ಪ್ರಯತ್ನ ನಡೆಸಿರುವುದು ಬಾಪೂಜಿ ಹಾಗೂ ಚೇತನ ದಂಪತಿಗೆ ಅರಿವಾಯಿತು. ಹೊಟ್ಟೆಕಿಚ್ಚಿನ ಕಾರಣ ಮಗು ಕೊಲ್ಲುವಷ್ಟರ ಮಟ್ಟಿಗೆ ಯೋಚಿಸಿದ ಸುಚಿತ್ರ ಯತಿನ್ ನಾಯ್ಕ ಅವರ ವಿರುದ್ಧ ಬಾಪೂಜಿ ಅವರು ಪೊಲೀಸ್ ದೂರು ನೀಡಿದರು. ಸದ್ಯ ಪೊಲೀಸರು ಈ ಪ್ರಕರಣದ ವಿಚಾರಣೆ ನಡೆಸಿ, ಸತ್ಯಾಸತ್ಯತೆಯ ಶೋಧ ಶುರು ಮಾಡಿದ್ದಾರೆ.