ಜೊಯಿಡಾದ ರಾಮನಗರದಲ್ಲಿ ಮತ್ತೆ ರಸ್ತೆ ಕುಸಿದಿದೆ. ಕಳೆದ ವರ್ಷ ರಸ್ತೆ ಕುಸಿದ ಸ್ಥಳದಲ್ಲಿಯೇ ಮತ್ತೆ ಕುಸಿತ ಸಂಭವಿಸಿದೆ.
ಭಾನುವಾರ ಜೋಯಿಡಾ ತಾಲೂಕಿನ ರಾಮನಗರದ ಗಣೇಶಗಲ್ಲಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಈ ಕುಸಿತ ಸಂಭವಿಸಿದೆ. ಕುಸಿತದ ಕಾರಣ ಅಲ್ಲಿ ಕಾರೊಂದು ಸಿಕ್ಕಿ ಬಿದ್ದಿದೆ. ಕಾರಿನ ಮುಂಬಾಗ ಮಣ್ಣಿನಲ್ಲಿ ಹೂತು ಹೋಗಿದ್ದು, ಅದನ್ನು ಹೊರ ತೆಗೆಯಲು ಚಾಲಕ ಸಾಹಸಪಟ್ಟಿದ್ದಾರೆ. ನಂತರ ಅಲ್ಲಿದ್ದ ಜನ ಸಹಾಯ ಮಾಡಿದ ಪರಿಣಾಮ ಕಾರು ಮತ್ತೆ ರಸ್ತೆಗೆ ಬಂದಿದೆ.
ಕಳೆದ ಮೂರು ವರ್ಷಗಳಿಂದ ಈ ರಸ್ತೆ ಕುಸಿಯುತ್ತಲೇ ಇದೆ. ಮಳೆಗಾಲದ ಅವಧಿಯಲ್ಲಿ ಎಲ್ಲಿ ರಸ್ತೆ ಕುಸಿಯಲಿದೆ? ಎಂದು ಅಂದಾಜಿಸುವುದೇ ಕಷ್ಟವಾಗಿದೆ. ಕಳೆದ ವರ್ಷ ಟ್ರ್ಯಾಕ್ಟರ್, ಅದಕ್ಕೂ ಮುನ್ನ ಟಿಪ್ಪರ್ ಇದೇ ಸ್ಥಳದಲ್ಲಿ ಸಿಲುಕಿ ಸಮಸ್ಯೆಯಾಗಿತ್ತು. ಆ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವ ಕ್ರಮವೂ ಆಗಿಲ್ಲ ಎಂಬುದು ಜನರ ದೂರು.
`ಹಲವಾರು ಬಾರಿ ದೂರು ನೀಡಿದರೂ ಅಧಿಕಾರಿಗಳು ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಮಾತ್ರ ಸೀಮಿತರಾಗಿದ್ದಾರೆ . ಈವರೆಗೂ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ’ ಎಂದು ಜನ ಆರೋಪಿಸಿದ್ದಾರೆ. `ಈ ಮಾರ್ಗದಲ್ಲಿ ಶಾಲಾ ಮಕ್ಕಳು ಸಂಚರಿಸುವ ಬಸ್ ಸಹ ಓಡಾಡಲಿದ್ದು, ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ಸದ್ಯ ರಾತ್ರಿ ಸಂಚರಿಸುವ ವಾಹನಗಳಿಗೆ ಸಮಸ್ಯೆ ಆಗದ ಹಾಗೇ ಸ್ಥಳೀಯ ನಿವಾಸಿ ದೀಪಕ್ ದುಗಾಣೆ ಅವರು ಅಲ್ಲಿ ವಿವಿಧ ಕಡ್ಡಿಗಳನ್ನು ನೆಟ್ಟು ಎಚ್ಚರಿಕೆ ನೀಡಿದ್ದಾರೆ.