ಕಂಠಪೂರ್ತಿ ಸರಾಯಿ ಕುಡಿದ ಕಾರವಾರದ ವ್ಯಾಪಾರಿ ವಸಂತ ಶೇಟ್ ಅವರು ಅಡ್ಡಾದಿಡ್ಡಿ ಕಾರು ಓಡಿಸಿದ್ದು, ಹಲವು ಅವಾಂತರಗಳಿಗೆ ಕಾರಣರಾಗಿದ್ದಾರೆ. ವಸಂತ ಶೇಟ್ ಅವರು ಓಡಿಸಿದ ಕಾರು ಗಿಂಡಿವಾಡದ ಬಳಿ ಮತ್ತೊಂದು ಕಾರಿಗೆ ಗುದ್ದಿದ್ದು, ಅದಾದ ನಂತರ ಆಂಬುಲೆನ್ಸಿಗೆ ಡಿಕ್ಕಿ ಹೊಡೆದಿದೆ. ನಂತರ ತರಕಾರಿ ಮಾರಾಟ ಮಾಡುತ್ತಿದ್ದ ಪ್ರಮೀಳಾ ತಳ್ಳೇಕರ್ ಅವರಿಗೂ ಆ ಕಾರು ಗುದ್ದಿದೆ.
ಕಾರವಾರದ ಬಾಡ ಬಳಿಯ ಸೋನಾರವಾಡದ ಬಳಿ ವಸಂತ ಕರಿಯಪ್ಪ ಶೇಟ್ ಅವರು ವಾಸವಾಗಿದ್ದಾರೆ. ವ್ಯಾಪಾರಿಯಾಗಿ ಬದುಕು ಕಟ್ಟಿಕೊಂಡಿರುವ ಅವರಿಗೆ ಹಗಲಿನಲ್ಲಿಯೇ ಮದ್ಯಪಾನ ಮಾಡುವ ಚಟವಿದೆ. ಮದ್ಯಪಾನ ಮಾಡಿದ ನಂತರ ಮನೆಯಲ್ಲಿರುವುದನ್ನು ಬಿಟ್ಟು ಅವರು ತಮ್ಮ ಕಾರು ತೆಗೆದುಕೊಂಡು ಎಲ್ಲಡೆ ಓಡಾಡುತ್ತಿದ್ದು, ಅದು ಒಂದಿಲ್ಲೊoದು ಅವಘಡಕ್ಕೆ ಕಾರಣವಾಗಿದೆ.
ಜುಲೈ 19ರಂದು ಮಧ್ಯಾಹ್ನವೇ ವಸಂತ ಶೇಟ್ ಅವರು ಟೈಟ್ ಆಗಿದ್ದಾರೆ. ಅದಾದ ನಂತರ ತಮ್ಮ ಕಾರಿನ ಜೊತೆ ಅವರು ರಸ್ತೆಗಿಳಿದಿದ್ದಾರೆ. ಸಾಯಿ ನಗರದಿಂದ ನಂದನಗದ್ದಾ ಕಡೆ ಕಾರು ಓಡಿಸಿದ ಅವರು ಒಮ್ಮೆಲೆ ತಾವು ಚಲಿಸುವ ದಿಕ್ಕು ಬದಲಿಸಿದ್ದಾರೆ. ಗಿಂಡಿವಾಡದ ಸರ್ಕಾರಿ ಶಾಲೆಯ ಬಳಿ ಅದೇ ವೇಗದಲ್ಲಿ ಕಾರು ತಿರುಗಿಸಿದ್ದು, ಅಲ್ಲಿದ್ದ ಮನೆ ಕಪೌಂಡ್’ಗೆ ಡಿಕ್ಕಿಯಾಗುವುದನ್ನು ಒಮ್ಮೆ ತಪ್ಪಿಸಿದ್ದಾರೆ. ಆದರೆ, ಅಲ್ಲಿದ್ದ ಮತ್ತೊಂದು ಕಾರಿಗೆ ತಮ್ಮ ಕಾರು ಗುದ್ದಿದ್ದಾರೆ. ಅದಾದ ನಂತರ ಅಲ್ಲಿದ್ದವರು ಕೂಗಿದರೂ ಕಾರು ನಿಲ್ಲಿಸದೇ ಇನ್ನಷ್ಟು ವೇಗವಾಗಿ ಶಿವಾಜಿ ಸರ್ಕಲ್ ಕಡೆ ಕಾರು ಓಡಿಸಿದ್ದಾರೆ. ಶಿವಾಜಿ ಸರ್ಕಲ್ ಬಳಿಯಿದ್ದ 108 ಆಂಬುಲೆನ್ಸಿಗೆ ತಮ್ಮ ಕಾರು ಗುದ್ದಿದ್ದಾರೆ.
ಆಂಬುಲೆನ್ಸಿಗೆ ಕಾರು ಗುದ್ದಿದ ನಂತರವೂ ಕಾರು ನಿಲ್ಲಿಸದ ವಸಂತ ಶೇಟ್ ಅವರು ಅಲ್ಲಿ ತರಕಾರಿ ಮಾರುತ್ತಿದ್ದ ಅಮದಳ್ಳಿಯ ಪ್ರಮೀಳಾ ಪಾಂಡುರoಗ ತಳ್ಳೇಕರ್ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದಿಂದ ಪ್ರಮೀಳಾ ತಳ್ಳೇಕರ್ ಅವರಿಗೆ ಪೆಟ್ಟಾಗಿದ್ದು, ಅವರು ಆಸ್ಪತ್ರೆ ಸೇರಿದ್ದಾರೆ. ಈ ಎಲ್ಲಾ ಅಪಘಾತದ ಬಗ್ಗೆ ಅರ್ಗಾ ನೇವಲ್ ಬೇಸ್ ಉದ್ಯೋಗಿ ಪ್ರಜ್ವಲ್ ರಾಜೇಂದ್ರ ನಾಯ್ಕ ಅವರು ಪೊಲೀಸರಿಗೆ ವರದಿ ಒಪ್ಪಿಸಿದ್ದಾರೆ. ಸರಾಯಿ ಸೇವಿಸಿ ಕಾರು ಓಡಿಸಿದಲ್ಲದೇ ಅನೇಕ ಅವಾಂತರ ಮಾಡಿದ ವಸಂತ ಶೇಟ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
`ಮದ್ಯಪಾನ ಮಾಡಬೇಡಿ. ಸಂಚಾರಿ ನಿಯಮ ಉಲ್ಲಂಘಿಸಬೇಡಿ’