ಕಾರವಾರದ ಸದಾಶಿವಗಡದ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಸುನೀಲ ಐಗಳ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಲಯನ್ಸ್ ಕ್ಲಬ್’ನ ಮಾನವೀಯ ಸೇವಾ ಚಳುವಳಿಯನ್ನು ಇನ್ನಷ್ಟು ವಿಸ್ತರಿಸುವುದಾಗಿ ಅವರು ಘೋಷಿಸಿದ್ದಾರೆ.
ಸದಾಶಿವಗಡದ ಕೊಂಕಣವಾಡದ ಗಣೇಶ ಅಪಾರ್ಟ್ಮೆಂಟ್’ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುನೀಲ ಐಗಳ ಅವರು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದ್ದಾರೆ. ಲಯನ್ಸ್ ಕ್ಲಬ್’ನ ಎಮ್ ಜೆ ಎಫ್ ಸಂದೀಪ್ ಅಣ್ವೇಕರ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ್ದಾರೆ. ಸದಾಶಿವಗಡ ಕೊಂಕಣ ಮರಾಠ ಮಂಡಳದ ಅಧ್ಯಕ್ಷ ಗಜಾನನ ರಾಣೆ ಅವರು ಈ ಕಾರ್ಯಕ್ರಮದಲ್ಲಿ ಮಾತನಾಡಿ `ಲಯನ್ಸ್ ಕ್ಲಬ್ ಕಳೆದ ವರ್ಷಗಳಲ್ಲಿ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಾಡಿರುವ ಕಾರ್ಯಗಳನ್ನು ಮಾಡುತ್ತಿದೆ. ಅದು ಶ್ಲಾಘನೀಯ’ ಎಂದಿದ್ದಾರೆ.
ನೂತನ ಅಧ್ಯಕ್ಷ ಸುನೀಲ ಐಗಳ ಅವರು ಮಾತನಾಡಿ `ತಮ್ಮ ಅಧಿಕಾರಾವಧಿಯಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತೇನೆ’ ಎಂದಿದ್ದಾರೆ. ನಿಕಟ ಪೂರ್ವ ಅಧ್ಯಕ್ಷ ನಯೀಮ ಮುಖಾದಮ್ ಅವರು ಕಳೆದ ವರ್ಷದ ಸಾಧನೆಗಳನ್ನು ನೆನಪಿಸಿ, ನೂತನ ತಂಡಕ್ಕೆ ಶುಭ ಹಾರೈಸಿದ್ದಾರೆ. ಪ್ರಮುಖರಾದ ಸೋನಿಯಾ ಅಣ್ವೇಕರ ಅವರು ಧ್ವಜವಂದನೆ ನೆರವೇರಿಸಿದ್ದು, ಸುಚಿತಾ ನಾಯ್ಕ, ಗಣೇಶ ಬಿಷ್ಟಣ್ಣನವರ ಹಾಗೂ ಇತರರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.