ಕಾರವಾರದ ಅಬಕಾರಿ ಇಲಾಖೆ ಅಂಚಿನಲ್ಲಿ ನಾಲ್ಕು ಪ್ಲಾಟ್ ಹೊಂದಿದ್ದ ಸುಲೇಮಾನ್ ಖಾನ್ ಅವರು ನಕಲಿ ದಾಖಲೆ ಸೃಷ್ಠಿಸಿ ಹಣ ವರ್ಗಾವಣೆ ಮಾಡಿದ ಆರೋಪಿಯಾಗಿದ್ದು, ಗೋವಾ ಜಾರಿ ನಿರ್ದೇಶನಾಲಯ ಆರೋಪಿಯನ್ನು ಬಂಧಿಸಿದೆ. ತನಿಖೆಯ ವೇಳೆ ಆ ಆರೋಪಿ ಹೆಸರು ಸುಲೇಮಾನ್ ಅಲ್ಲ, ಸಿದ್ಧಿಕ್ ಖಾನ್ ಎಂದು ಗೊತ್ತಾಗಿದೆ.
ಈ ಸಿದ್ಧಿಕ್ ಖಾನ್ ಅವರು ಕಾರವಾರದಲ್ಲಿ ಐದು ವರ್ಷ ನೆಲೆಸಿದ್ದರು. ಅಬಕಾರಿ ಇಲಾಖೆ ಎದುರು ನಾಲ್ಕು ಪ್ಲಾಟ್ ಖರೀದಿಸಿದ್ದರು. ಶಿವಮೊಗ್ಗದವ ಎಂದು ಪರಿಚಿಯಸಿಕೊಂಡು ಅನೇಕರ ಸ್ನೇಹ ಬೆಳೆಸಿದ್ದರು. ನಂತರ ತಮ್ಮ ಕುಟುಂಬವನ್ನು ಕಾರವಾರಕ್ಕೆ ಕರೆತಂದು ಇಲ್ಲಿಯೇ ಸಂಸಾರ ಹೂಡಿದ್ದರು. ತಾವು ಮಾತ್ರ ಗೋವಾ ಜೊತೆ ನಂಟು ಹೊಂದಿದ್ದು, ಅಲ್ಲಿ ಸುಮಾರು 300 ಕೋಟಿ ರೂ ಬೆಲೆ ಬಾಳುವ 25 ಹೆಕ್ಟೇರ್ ಭೂಮಿಯನ್ನು ಖರೀದಿಸಿದ್ದರು. ಈ ಭೂಮಿ ಖರೀದಿಗೆ ಸಹ ನಕಲಿ ದಾಖಲೆ ಸೃಷ್ಠಿ ಮಾಡಿದ್ದು, ಸದ್ಯ ಅವರು ಜೈಲು ಸೇರಿದ್ದಾರೆ.
ಸಿದ್ದಿಕ್ ಖಾನ್ ಹಾಗೂ ಅವರ ತಂಡ ಸಾವನಪ್ಪಿದವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸುತ್ತಿದ್ದು, ಪೂರ್ವಜರ ದಾಖಲೆಗಳನ್ನು ತಿದ್ದುಪಡಿ ಮಾಡುವಲ್ಲಿ ಪರಿಣಿತರಾಗಿದ್ದರು. ಹಿಂದಿನ ದಿನಾಂಕದ ಕ್ರಯಪತ್ರಗಳು ಹಾಗೂ ಮಾಲೀಕತ್ವದ ದಾಖಲೆಗಳನ್ನು ಸೃಷ್ಟಿಸಿ ಭೂಮಿಯನ್ನು ಕಬಳಿಸುತ್ತಿದ್ದರು. 2024ರಲ್ಲಿ ಸಿದ್ದಿಕ್ ಖಾನ್ ಅವರನ್ನು ಗೋವಾ ಎಸ್ಐಟಿ ತಂಡ ಇದೇ ವಿಷಯವಾಗಿ ಬಂಧಿಸಿದ್ದು, ಆಗ ಅವರು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು. ಸ್ನೇಹಿತನ ಸಹಾಯದಿಂದ ಹುಬ್ಬಳ್ಳಿಗೆ ಹೋಗಿ, ಅಲ್ಲಿಂದ ಕೇರಳಕ್ಕೆ ಹೋಗಿದ್ದ ಆರೋಪಿಯನ್ನು ಮತ್ತೆ ಬಂಧಿಸಲಾಗಿತ್ತು.
ಈ ವೇಳೆ ಗೋವಾ ಎಸ್ಐಟಿ ತಂಡವು ಕಾರವಾರದಲ್ಲಿರುವ ಸಿದ್ದಿಕ್ ಖಾನ್ ಅವರ 4 ಫ್ಲಾಟ್ಗಳನ್ನು ವಶಕ್ಕೆಪಡೆದು, ನೋಟಿಸ್ ಜಾರಿ ಮಾಡಿತ್ತು. ಸದ್ಯ ಗೋವಾ ಎಸ್ಐಟಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಆರೋಪಿಯನ್ನು ಮತ್ತೊಮ್ಮೆ ಬಂಧಿಸಿದೆ.