ರಾತ್ರಿ ವೇಳೆ ಮನೆಗೆ ಮರಳುತ್ತಿದ್ದ ಮೋಹನ ದೇಶಭಂಡಾರಿ ಅವರಿಗೆ ಆಕಳು ಅಡ್ಡಬಂದಿದ್ದು, ಬೈಕಿನಿಂದ ಬಿದ್ದ ಅವರನ್ನು ಮಣಿಪಾಲ್ ಕಸ್ತೂರಿಬಾ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಆ ಆಸ್ಪತ್ರೆಯವರು ಕೈ ಚೆಲ್ಲಿದ ಕಾರಣ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿದ್ದು ಅಲ್ಲಿ ಆರೈಕೆಯಲ್ಲಿರುವಾಗಲೇ ಮೋಹನ ದೇಶಭಂಡಾರಿ ಅವರು ಸಾವನಪ್ಪಿದ್ದಾರೆ.
ಕುಮಟಾದ ಹರೀಟಾ ಬಳಿಯ ಕೋಡಂಬಳೆಯಲ್ಲಿ ಮೋಹನ ಗಣೇಶ ದೇಶಭಂಡಾರಿ (64) ಅವರು ವಾಸವಾಗಿದ್ದರು. ಜುಲೈ 12ರ ರಾತ್ರಿ ಕತಗಾಲದಿಂದ ಹರೀಟಾ ಗ್ರಾಮದ ಕಡೆ ಹೋಗುವಾಗ ಅವರು ಅಪಘಾತಕ್ಕೀಡಾದರು. ಬೈಕಿನಲ್ಲಿ ತೆರಳುತ್ತಿದ್ದ ಅವರಿಗೆ ಕ್ಯಾಕೋಡ ಕ್ರಾಸಿನ ಬಳಿ ದಿಢೀರ್ ಆಕಳು ಅಡ್ಡ ಬಂದಿದ್ದು ಅದರಿಂದ ಬೆದರಿ ಅವರು ನೆಲಕ್ಕೆ ಅಪ್ಪಳಿಸಿದರು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಅವರನ್ನು ಮೊದಲು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಅಲ್ಲಿನ ವೈದ್ಯರು `ಮೋಹನ ದೇಶಭಂಡಾರಿ ಅವರು ಗುಣಮುಖನಾಗುವುದು ಅಸಾಧ್ಯ’ ಎಂದರು. ಹೀಗಾಗಿ ಜುಲೈ 16ರಂದು ಅವರನ್ನು ಮತ್ತೆ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಜುಲೈ 19ರಂದು ಅವರು ಸಾವನಪ್ಪಿದರು.