ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆ ಪರಿಣಾಮ ಶಿರಸಿ ಹಾಗೂ ಯಲ್ಲಾಪುರದ ಅಲ್ಲಲ್ಲಿ ಭೂ ಕುಸಿತ ಉಂಟಾಗಿದೆ.
ಯಲ್ಲಾಪುರದಿoದ ಕಳಚೆಗೆ ಹೋಗುವ ಮಾರ್ಗ ಮಧ್ಯೆ ಗುರುವಾರ ಬೆಳಗ್ಗೆ ಭೂ ಕುಸಿತ ಉಂಟಾಗಿತ್ತು. ತಳಕೆಬೈಲ್ ಬಳಿ ಭೂಮಿ ಕುಸಿದಿರುವುದನ್ನು ಅರಿತು ಅಧಿಕಾರಿಗಳು ಅಲ್ಲಿ ದೌಡಾಯಿಸಿದರು. ರಸ್ತೆಯ ಮೇಲೆ ಇಲ್ಲಿ ಮಣ್ಣು ಕುಸಿದಿರುವುದನ್ನು ಗಮನಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಲೋಕೋಪಯೋಗಿ ಇಲಾಖೆ, ಗ್ರಾಮ ಪಂಚಾಯತ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ರಸ್ತೆ ಮೇಲೆ ಬಿದ್ದ ಮಣ್ಣು ತೆರವು ಮಾಡಿದರು. ಸದ್ಯ ವಾಹನ ಓಡಾಟಕ್ಕೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ. ಉಳಿದ ಮಣ್ಣನ್ನು ಬೇರೆಡೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ.
ಶಿರಸಿಯ ನೆಗ್ಗು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಯೂ ಈ ದಿನ ಭಾರೀ ಪ್ರಮಾಣದ ಮಳೆಯಾಗಿದೆ. ಪರಿಣಾಮ ಅಲ್ಲಿನ ತಟಗುಣಿ ಸೇತುವೆ ಬಳಿ ಭೂ ಕುಸಿತವಾಗಿದೆ. ಈ ಮಾರ್ಗದ ಸಂಚಾರ ಬಂದ್ ಆಗಿದ್ದು, ಸುಗಮ ವಾಹನ ಓಡಾಟಕ್ಕೆ ಸಮಸ್ಯೆ ಆಗದಂತೆ ರಕ್ಷಣಾ ಕಾರ್ಯಾಚರಣೆ ಶುರುವಾಗಿದೆ. ಯಲ್ಲಾಪುರ ಮುಂಡಗೋಡು ಮಾರ್ಗವಾಗಿ ಗುರುವಾರ ಮರ ಮುರಿದು ಬಿದ್ದಿತ್ತು. ಅದರಿಂದ ವಾಹನ ಸಂಚಾರ ಅಸ್ತವ್ಯಸ್ಥವಾಗಿದ್ದು, ಅಧಿಕಾರಿಗಳು ಅಲ್ಲಿಗೂ ಧಾವಿಸಿ ಮರ ತೆರವು ಮಾಡಿದ್ದಾರೆ.
ಶಿರಸಿ-ಯಲ್ಲಾಪುರ ರಸ್ತೆಯ ಮಾರ್ಗವಾಗಿ ಜೋರು ಮಳೆಯಾಗುತ್ತಿದೆ. ಪರಿಣಾಮ ಮಂಚಿಕೇರಿಯ ಆಂಟೋನಿ ರೋಡಿಗ್ರಿಸ್ ಅವರ ಮನೆಯ ಗೋಡೆ ಕುಸಿದಿದೆ. ಮನೆಯಲ್ಲಿ ಅವರು ವಾಸವಾಗಿಲ್ಲದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಮಂಚಿಕೇರಿ ಪದವಿ ಪೂರ್ವ ಕಾಲೇಜಿನ ಒಳಗೆ ಮಳೆ ನೀರು ನುಗ್ಗಿದೆ. ಜೊತೆಗೆ ಸಮೀಪದ ಕ್ರೀಡಾಂಗಣದಲ್ಲಿ ಭೂ ಕುಸಿತವಾಗಿದ್ದು, ಅಲ್ಲಿ ಕಟ್ಟಲಾಗಿದ್ದ ಕಲ್ಲುಗಳು ಉರುಳಿ ಬಿದ್ದಿದೆ.