ಮುಂಡಗೋಡು ಕರಗಿನಕೊಪ್ಪ ಗ್ರಾಮದ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಮಾರಾಮಾರಿ ನಡೆದಿದೆ. ವಿದ್ಯಾರ್ಥಿಗಳ ನಡುವೆ ಹುಟ್ಟಿದ ಭಿನ್ನಾಭಿಪ್ರಾಯದಿಂದ ಕೆರಳಿದ ಪಾಲಕರು ಕಾಲೇಜಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ.
ಮುಂಡಗೋಡ ತಾಲೂಕಿನ ಕರಗಿನಕೊಪ್ಪ ಗ್ರಾಮದ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಸಣ್ಣ ವಿಷಯಕ್ಕೆ ಗೊಂದಲ ಉಂಟಾಗಿತ್ತು. ಇಲ್ಲಿನ ಬಾಲಕರ ವಸತಿ ನಿಲಯದಲ್ಲಿ 9ನೇ ತರಗತಿ ವಿದ್ಯಾರ್ಥಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಗೆ ತಿರುಗಿತ್ತು. ಈ ಘಟನೆಯ ಸತ್ಯಾಸತ್ಯತೆ ತಿಳಿದುಕೊಳ್ಳಲು ಪ್ರಾಂಶುಪಾಲ ಆನಂದ ಚಿಕ್ಕೋಡಿ ಅವರು ಶಿಕ್ಷಕರ ಸಮ್ಮುಖದಲ್ಲಿ ಸಂಬAಧಿತ ವಿದ್ಯಾರ್ಥಿಗಳನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದರು.
ವಿದ್ಯಾರ್ಥಿಗಳ ನಡುವಿನ ವಿವಾದದ ಕುರಿತು ಕಾಲೇಜಿನವರು ವಿಚಾರಣೆ ನಡೆಸಲು ನಿರ್ಧರಿಸಿದ್ದರು. ವಿಚಾರಣೆ ವೇಳೆ ಕೆಲ ಪೋಷಕರು ಆಗಮಿಸಿದ್ದು, ಅವರು ಕಾಲೇಜಿನಲ್ಲಿದ್ದ ಎದುರು ಗುಂಪಿನ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ತಡೆಯಲು ಪ್ರಯತ್ನಿಸಿದ ಸಿಬ್ಬಂದಿ ಮೇಲೆಯೂ ದಾಳಿ ನಡೆದಿದೆ. ಈ ವೇಳೆ ಕಾಲೇಜು ವಾತಾವರಣದಲ್ಲಿ ಗೊಂದಲ ಕಾಣಿಸಿದ್ದು, ನೂಕು ನುಗ್ಗಾಟ ಸಾಮಾನ್ಯವಾಗಿತ್ತು. ಸದ್ಯ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದಾರೆ.