ಮಳಗಿಯ ದಂಪತಿ ಬೆಂಕಿಯ ಜ್ವಾಲೆಯಲ್ಲಿ ಬೆಂದು ಆಸ್ಪತ್ರೆ ಸೇರಿದ್ದು, ಶಿರಸಿಯ ಟಿಎಸ್‌ಎಸ್ ಆಸ್ಪತ್ರೆಯಲ್ಲಿ ಜ್ಯೋತಿ ಜಾದವ್ ಅವರು ಸಾವನಪ್ಪಿದ್ದಾರೆ. ಅವರ ಪತಿ ಕೃಷ್ಣ ಜಾದವ್ ಅವರಿಗೂ ಬೆಂಕಿ ತಗುಲಿದ್ದು, ಅವರು ಸಾವು-ಬದುಕಿನ ಹೋರಾಟ ನಡೆಸಿದ್ದಾರೆ.
ಮುಂಡಗೋಡಿನ ಮಳಗಿಯ ಬೋರನಗುಡ್ಡದಲ್ಲಿ ಜ್ಯೋತಿ ಕೃಷ್ಣ ಜಾದವ್ ಹಾಗೂ ಕೃಷ್ಣ ಶಿವಾಜಿ ಜಾದವ್ ಅವರು ವಾಸವಾಗಿದ್ದರು. ಅವರಿಬ್ಬರೂ ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಪ್ರಾಥಮಿಕ ಮಾಹಿತಿಗಳ ಪ್ರಕಾರ ಜ್ಯೋತಿ ಯಾದವ್ ಅವರು ಜುಲೈ 26ರಂದು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಅದನ್ನು ನೋಡಿದ ಕೃಷ್ಣ ಜಾದವ್ ಅವರು ರಕ್ಷಣೆಗೆ ಧಾವಿಸಿದರು. ಆದರೆ, ಅದೇ ಬೆಂಕಿಯಲ್ಲಿ ಕೃಷ್ಣ ಜಾದವ್ ಅವರು ಸುಟ್ಟಿದ್ದು ಇದನ್ನು ನೋಡಿದವರು ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದರು.
ಶಿರಸಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರಿಬ್ಬರಿಗೂ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡ ಜ್ಯೋತಿ ಜಾದವ್ ಅವರನ್ನು ಟಿಎಸ್‌ಎಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನಪ್ಪಿದರು. ತಂಗಿಯ ಸಾವಿನ ಬಗ್ಗೆ ಶಿರಸಿ ದಾಸನಕೊಪ್ಪ ಬದನಗೋಡಿನ ಗಣಪತಿ ಮಂಜುನಾಥ ಬಂಡೇರ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಾವಿನಲ್ಲಿ ಸಂಶಯವ್ಯಕ್ತಪಡಿಸಿದರು. ಜೊತೆಗೆ ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರಕರಣ ದಾಖಲಿಸಿದರು.