ಭಟ್ಕಳ ಕಟಗಾರಕೊಪ್ಪ ಹಲ್ಲಂದಿಯ ನಾಗರಾಜ ಗೊಂಡ ಅವರು ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿನ ಆದಾಯ ಸಾಲದ ಕಾರಣ ಕಳ್ಳತನದ ಹಾದಿ ಹಿಡಿದಿದ್ದಾರೆ. ಕಿರಾಣಿ ವ್ಯಾಪಾರಿ ಮಾದೇವ ನಾಯ್ಕ ಅವರ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಅವರನ್ನು ಪೊಲೀಸರು ಬಂಧಿಸಿ, ಜೈಲಿಗೆ ಹಾಕಿದ್ದಾರೆ.
ಜುಲೈ 20ರ ರಾತ್ರಿ ಭಟ್ಕಳದ ಮುರುಡೇಶ್ವರ ಬೈಲೂರು ದೊಡ್ಡ ಬೆಳಸೆಯಲ್ಲಿ ಮಾದೇವ ನಾರಾಯಣ ನಾಯ್ಕ ಅವರು ಕಿರಾಣಿ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗುತ್ತಿದ್ದರು. ಆಗ, ಅಪರಿಚಿತರಿಬ್ಬರು ಅವರನ್ನು ಅಡ್ಡಹಾಕಿ `ಬೆಲಸೆ ಭಟ್ಟರ ಮನೆಗೆ ಹೋಗುವ ದಾರಿ ಹೇಗೆ?’ ಎಂದು ಕೇಳಿದ್ದರು. ಅವರಿಗೆ ಸಹಾಯ ಮಾಡಲು ಮುಂದಾದ ಮಾದೇವ ನಾಯ್ಕ ಅವರ ಕೊರಳಿಗೆ ಕೈ ಹಾಕಿ ಅವರು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಮುರುಡೇಶ್ವರ ಪೊಲೀಸರು ಆ ದಡಾಯಿತರಲ್ಲಿ ಒಬ್ಬರನ್ನು ಹಿಡಿದಿದ್ದಾರೆ. ಭಟ್ಕಳ ಕಟಗಾರಕೊಪ್ಪ ಹಲ್ಲಂದಿಯ ನಾಗರಾಜ ಗಣಪತಿ ಗೊಂಡ ಅವರೇ ಚಿನ್ನದ ಸರ ಎಗರಿಸಿದವರಾಗಿದ್ದಾರೆ.
ಈ ಡಕಾಯಿತರನ್ನು ಹಿಡಿಯಲು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಒಂದು ತಂಡ ರಚಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಹಾಗೂ ಡಿವೈಎಸ್ಪಿ ಗಿರೀಶ್ ಬಿ ಅವರು ಆ ತಂಡಕ್ಕೆ ಸಲಹೆ-ಸೂಚನೆ ನೀಡಿದ್ದರು. ಮುರುಡೇಶ್ವರ ಪಿಐ ಜಗದೀಶ ಹಂಚನಾಳ ಆ ತಂಡದ ಮುಂದಾಳತ್ವವಹಿಸಿದ್ದು, ಪಿಸೈ ಹನುಮಂತ ಬೀರಾದರ್ ಅವರು ಪೊಲೀಸ್ ಸಿಬ್ಬಂದಿ ಸುಬ್ರಹ್ಮಣ್ಯ ನಾಯ್ಕ, ಅರುಣ ಪಿಂಟೋ, ಮಂಜುನಾಥ ಲಕ್ಮಾಪುರ, ಬಿಲಾಲಹ್ಮದ್ ಸಿದ್ದಾಪುರ, ವಿಜಯ ನಾಯ್ಕ, ಮಹೇಶ ಸನಮಳ್ಳಿ, ಸಿದ್ದಪ್ಪ ಕಾಂಬ್ಳೆ, ಸದಾಶಿವ ಕಟ್ಟಿಮನಿ ಅವರ ನೆರವಿನಲ್ಲಿ ಶೋಧ ಶುರು ಮಾಡಿದರು.
ಆಗ, ಕಟಗಾರಕೊಪ್ಪ ಹಲ್ಲಂದಿಯ ನಾಗರಾಜ ಗೊಂಡ ಅವರು ಸಿಕ್ಕಿ ಬಿದ್ದಿದ್ದು, ಅವರನ್ನು ವಶಕ್ಕೆಪಡೆದರು. ಮಾದೇವ ನಾಯ್ಕ ಅವರು ಕಳೆದುಕೊಂಡಿದ್ದ ಚಿನ್ನದ ಸರವನ್ನು ವಶಕ್ಕೆಪಡೆದರು. ನಾಗರಾಜ ಗೊಂಡ ಅವರಿಗೆ ಸಹಾಯ ಮಾಡಿದ್ದ ಮತ್ತೊಬ್ಬನ ಶೋಧ ಮುಂದುವರೆದಿದ್ದು, ಪೊಲೀಸರು ಆ ಡಕಾಯಿತನನ್ನು ಬಂಧಿಸುವ ವಿಶ್ವಾಸವ್ಯಕ್ತಪಡಿಸಿದ್ದಾರೆ.