ಶಿರೂರು ಗುಡ್ಡ ಕುಸಿತದ 50 ಮೀಟರ್ ಅಂತರದಲ್ಲಿ ಮತ್ತೊಂದು ಭೂ ಕುಸಿತ ವಲಯವಿರುವ ಬಗ್ಗೆ ಮಾಧ್ಯಮದವರು ಪ್ರಕೃತಿ ವಿಕೋಪ ಉಸ್ತುವಾರಿ ಯು ಟಿ ಖಾದರ್ ಅವರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಆ ಭಾಗದಲ್ಲಿ ಕಟ್ಟೆಚ್ಚರವಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾರವಾರದ ಸಭೆ ಮುಗಿಸಿ ಮರಳುತ್ತಿದ್ದ ಆರೋಗ್ಯ ಸಚಿವ ಯು ಟಿ ಖಾದರ್ ಅವರು ಶಿರೂರು ಗುಡ್ಡ ಕುಸಿತದ ಸ್ಥಳ ಪರಿಶೀಲನೆ ಮಾಡಿದರು. ಈ ವೇಳೆ ಶಿರೂರು ಗುಡ್ಡ ಕುಸಿತ ಪ್ರದೇಶದಿಂದ 50 ಮೀಟರ್ ದೂರದಲ್ಲಿ ಮತ್ತೆ ಭೂ ಕುಸಿತ ಸಂಭವಿಸುವ ಸಾಧ್ಯತೆಯ ಬಗ್ಗೆ ಅರಿತು ಅವರು ತುರ್ತು ಕ್ರಮಕ್ಕೆ ಸೂಚಿಸಿದರು. `ಸಾರ್ವಜನಿಕರ ಸುರಕ್ಷತೆಗೆ ಸರ್ಕಾರ ಮೊದಲ ಆದ್ಯತೆ ನೀಡಲಿದೆ’ ಎಂದವರು ಈ ವೇಳೆ ಹೇಳಿದರು.
`ಐಆರ್‌ಬಿ ಸಂಸ್ಥೆ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ಆತಂಕವಿದೆ’ ಎಂದು ಮಾಧ್ಯಮದವರು ಗಮನಸೆಳೆದಿದ್ದು, `ಈ ಕುರಿತು ಸ್ಥಳೀಯ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸುವೆ’ ಎಂದು ಉತ್ತರಿಸಿದರು. `ಸುರಕ್ಷತೆಗೆ ಆದ್ಯತೆ ನೀಡುವಂತೆ ಹಾಗೂ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಕಾಮಗಾರಿ ನಡೆಸುವಂತೆ ಸೂಚಿಸಲಾಗುತ್ತದೆ’ ಎಂದರು. ಅಲ್ಲಿಯೇ ಇದ್ದ ಶಾಸಕ ಸತೀಶ್ ಸೈಲ್ ಅವರು ಶಿರೂರು ಪ್ರದೇಶದ ಪ್ರಸಕ್ತ ಪರಿಸ್ಥಿತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ಅದಾದ ನಂತರ `ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡ ಕುಸಿತ ದುರಂತ ಇಡೀ ರಾಜ್ಯವನ್ನು ನೋವಿಗೆ ದೂಡಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ಯು ಟಿ ಖಾದರ್ ಅವರು ಹೇಳಿದರು. ಶಿರೂರು ಗಂಗಾವಳಿ ನದಿಯಲ್ಲಿ 4.34 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಮಣ್ಣು ತೆರವು ಕಾಮಗಾರಿಯನ್ನು ಅವರು ಪರಿಶೀಲಿಸಿದರು.
ಮಾಜಿ ಶಾಸಕ ಕೆ ಎಚ್ ಗೌಡ, ಡಿಸಿಸಿ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ, ಪಾಂಡುರAಗ ಗೌಡ, ಸುಜಾತಾ ಗಾಂವ್ಕರ್, ಗೋಪು ನಾಯಕ ಅಡ್ಲೂರು, ಬಿ ಡಿ ನಾಯ್ಕ, ಶಾಂತಿ ಆಗೇರ ಅವರು ಇದ್ದರು.