ಸಿದ್ದಾಪುರದಲ್ಲಿ ಬೇಕರಿ ನಡೆಸುತ್ತಿರುವ ಎಸ್ ಎಸ್ ಅರ್ಪಿತಾ ಅವರಿಗೆ `ಹಲೋ.. ಐ ಎಂ ಸಾನಿಯಾ’ ಎಂದು ಮೆಸೆಜ್ ಬಂದಿದೆ. ಆ ಮೆಸೆಜ್’ಗೆ ಮರುಳಾದ ಅರ್ಪಿತಾ ಅವರ ಬ್ಯಾಂಕ್ ಖಾತೆಯಿಂದ 5 ಲಕ್ಷ ರೂ ಹಣ ಮಾಯವಾಗಿದೆ!
ಹಾಸನದ ಎಸ್ ಎಸ್ ಅರ್ಪಿತಾ ಅವರು ಸದ್ಯ ಸಿದ್ದಾಪುರದ ಹೊಸೂರು ಕಾನಕೇರಿಯಲ್ಲಿ ವಾಸವಾಗಿದ್ದಾರೆ. ಇಲ್ಲಿ ಬೇಕರಿ ಮಾಡಿಕೊಂಡು ಅವರು ಬದುಕು ನಡೆಸುತ್ತಿದ್ದಾರೆ. ಜುಲೈ 21ರಂದು ಅವರು ಬೇಕರಿಯಲ್ಲಿ ವ್ಯಾಪಾರ ಮಾಡುವಾಗ ಅವರ ವಾಟ್ಸಪ್’ಗೆ ಮೆಸೆಜ್ ಒಂದು ಬಂದಿದೆ. ಆ ಮೆಸೆಜ್’ನ್ನು ಅವರು ಆಸಕ್ತಿಯಿಂದ ಓದಿದ್ದಾರೆ. ಅದರಲ್ಲಿ ಸಾನಿಯಾ ಎಂಬಾತರು ತಮ್ಮ ಪರಿಚಯ ಮಾಡಿಕೊಂಡು ತಾವು ನೀಡಿದ ಟಾಸ್ಕ್ ಮಾಡಿದರೆ ಹಣ ಕೊಡುವುದಾಗಿ ಹೇಳಿದ್ದಾರೆ.
ಇದನ್ನು ನಂಬಿದ ಅರ್ಪಿತಾ ಅವರು ಟಾಸ್ಕ್ ಬಗ್ಗೆ ಪ್ರಶ್ನಿಸಿದ್ದಾರೆ. ಆಗ, `ತಾವು ಹೇಳಿದ ರೆಸ್ಟೊರೆಂಟುಗಳಿಗೆ 5ಸ್ಟಾರ್ ರೇಟಿಂಗ್ ಕೊಡಬೇಕು. ಪ್ರತಿ ರೇಟಿಂಗ್’ಗೆ 50ರೂ ಕೊಡುತ್ತೇವೆ’ ಎಂದು ಸಾನಿಯಾ ಎಂಬಾತರು ಹೇಳಿದ್ದು, ಅರ್ಪಿತಾ ಅವರು ಅದಕ್ಕೆ ಒಪ್ಪಿದ್ದಾರೆ. ಒಟ್ಟು 11 ಟಾಸ್ಕನ್ನು ಅವರು ಪೂರ್ಣಗೊಳಿಸಿ, ಹಣ ಕೊಡುವಂತೆ ಕೇಳಿದ್ದಾರೆ.
ಅಷ್ಟರೊಳಗೆ ಅರ್ಪಿತಾ ಅವರ ಬ್ಯಾಂಕ್ ಖಾತೆಯಲ್ಲಿದ್ದ 514249ರೂ ಕಾಣೆಯಾಗಿದೆ. ಆ ಹಣಪಡೆದ ಸಾನಿಯಾ ಮಾಡಿದ ಕೆಲಸದ ಹಣವನ್ನು ಕೊಡದೇ ಮೋಸ ಮಾಡಿದ್ದಾರೆ.