`ಹಾವು ಕಚ್ಚಿದ ಕಾರಣ ಸಾವನಪ್ಪಿದ ಮಿಥುನ್ ನಾಯ್ಕ ಅವರ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ಕೊಡಬೇಕು’ ಎಂದು ಬಿಜೆಪಿಗರು ಆಗ್ರಹಿಸಿದ್ದಾರೆ. ಈ ಕುರಿತು ಬನವಾಸಿ ಬಿಜೆಪಿಗರು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಪತ್ರ ರವಾನಿಸಿದ್ದಾರೆ.
`ಶಿರಸಿ ತಾಲೂಕಿನ ಬನವಾಸಿಯ ಸಹಸ್ರಳ್ಳಿಯ ಮಿಥುನ್ ಪುಟ್ಟಪ್ಪ ನಾಯ್ಕ ಅವರಿಗೆ ಹಾವು ಕಚ್ಚಿ ಅಸ್ವಸ್ಥರಾದಾಗ ಅವರ ಕುಟುಂಬದವರು ಆಸ್ಪತ್ರೆಗೆ ಕರೆತಂದರೂ ಸರಿಯದ ಚಿಕಿತ್ಸೆ ಸಿಗಲಿಲ್ಲ. ವೈದ್ಯರ ಬೇಜವಬ್ದಾರಿಯಿಂದ ಈ ಸಾವು ನಡೆದಿದ್ದು, ವೈದ್ಯರೆಲ್ಲರೂ ಸೇರಿ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಇಲ್ಲವೇ ಸರ್ಕಾರವಾದರೂ ಸಹಾಯ ಮಾಡಬೇಕು’ ಎಂದು ಬನವಾಸಿ ಬಿಜೆಪಿ ಮಂಡಳ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಅವರು ಒತ್ತಾಯಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಅನಂತಮೂರ್ತಿ ಮಾತನಾಡಿ `ಶಾಸಕರಾದ ಭೀಮಣ್ಣ ನಾಯ್ಕ ಅವರು ತಮ್ಮ ವ್ಯಾಪ್ತಿಯ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸಿಲ್ಲ. ಹೀಗಾಗಿ ಮಿಥುನ್ ನಾಯ್ಕ ಅವರ ಸಾವಾಗಿದೆ. ಅದಾಗಿಯೂ, ಸಾವನಪ್ಪಿದ ಬಾಲಕನ ಕುಟುಂಬಕ್ಕೆ ಶಾಸಕರು ಸಾಂತ್ವಾನ ಹೇಳಿಲ್ಲ. ಘಟನೆಯ ಬಗ್ಗೆ ಆಸ್ಪತ್ರೆಯವರನ್ನು ವಿಚಾರಿಸಿಲ್ಲ’ ಎಂದು ದೂರಿದರು. `ಶಾಸಕರು ಇದೇ ರೀತಿ ದುರಹಂಕಾರ ಧೋರಣೆ ಮುಂದುವರೆಸಿದರೆ ಹಳ್ಳಿ ಹಳ್ಳಿಯಲ್ಲಿ ಪ್ರತಿಭಟನೆ ಅನಿವಾರ್ಯ’ ಎಂದು ಎಚ್ಚರಿಸಿದರು.
ಸಿದ್ದಾಪುರ ಬಿಜೆಪಿ ಮಂಡಲಾಧ್ಯಕ್ಷರಾದ ತಿಮ್ಮಪ್ಪ ಎಂ ಕೆ ಮಾತನಾಡಿ `ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಲಸಿಕೆಯಿಲ್ಲವೇ?’ ಎಂಬುದೇ ದೊಡ್ಡ ಪ್ರಶ್ನೆ. ಬಡವರನ್ನು ಹೀಗೆ ಸತಾಯಿಸುವುದು ಸರಿಯಲ್ಲ’ ಎಂದರು. ಪ್ರಮುಖರಾದ ಸತ್ಯವತಿ ನಾಯ್ಕ, ಮಿಥುನ್ ನಾಯ್ಕ ಅವರ ತಂದೆ ಪುಟ್ಟಪ್ಪ ನಾಯ್ಕ, ಬನವಾಸಿ ಮುಖಂಡರಾದ ಯುವರಾಜ ಗೌಡ ಮಾತನಾಡಿದರು. ಪ್ರಮುಖರಾದ ನಂದನ್ ಬೋರ್ಕರ್, ಪ್ರೇಮಕುಮಾರ ನಾಯ್ಕ, ಎಲ್ ಟಿ ಪಾಟೀಲ್, ರಾಘವೇಂದ್ರ ನಾಯ್ಕ, ಶಂಕರ ಗೌಡ, ಮಂಜುನಾಥ ನಾಯ್ಕ, ಗಣಪತಿ ಹೆಗಡೆ ಕಬ್ಬಿನಮನೆ, ರಾಘವೇಂದ್ರ ದೇವಾಡಿಗ, ಸುರೇಶ ನಾಯ್ಕ ಕಾನಗೋಡ, ನಾರಾಯಣ ಹೆಗಡೆ ಮತ್ತಿಗಟ್ಟ, ರವಿ ಗಾಂವಕರ, ಲಕ್ಷಿ ಕಾನಡೆ, ಮಣಿ ಪಾಟೀಲ್, ನಾರಾಯಣ ಗೌಡ, ವಸಂತ ಗೌಡ, ಮಹೇಂದ್ರ ಭಟ್ ಬಿಸಲಕೊಪ್ಪ ವಿ ಎಂ ಹೆಗಡೆ ಇತರರು ಪ್ರತಿಭಟನೆಯಲ್ಲಿದ್ದರು.