ಧಾರವಾಡದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ತುಪಾನ್ ಕ್ರೂಸರ್ ಯಲ್ಲಾಪುರದಲ್ಲಿ ಅಪಘಾತಕ್ಕೀಡಾಗಿದೆ. ಈ ಅವಘಡದಲ್ಲಿ ಒಟ್ಟು ಏಳು ಜನ ಸಾವನಪ್ಪಿದ್ದಾರೆ.
ಯಲ್ಲಾಪುರದ ಆರತಿಬೈಲ್ ಘಟ್ಟ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಅಪಘಾತ ನಡೆದಿದ್ದು, ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ. ಧಾರವಾಡದ ಕುಬರಗಟ್ಟಿಯ ಸಂಜೀವ ಮೈಲಾರ ಅಂಗಡಿ (33) ಅವರು ತುಫಾನ್ ಟ್ರಾಕ್ಸಿನಲ್ಲಿ ಎಂಟು ಜನ ಸ್ನೇಹಿತರನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದರು. ಧಾರವಾಡದಿಂದ ಹೊರಟ ಅವರೆಲ್ಲರೂ ಧರ್ಮಸ್ಥಳಕ್ಕೆ ಹೋಗಿ ಮುಂದೆ ಚಿಕ್ಕಮಂಗಳೂರು ಪ್ರವೇಶಿಸಲು ನಿರ್ಧರಿಸಿದ್ದರು. ಆದರೆ, ಗುರುವಾರ ನಸುಕಿನಲ್ಲಿ ಯಲ್ಲಾಪುರದ ಆರತಿಬೈಲ್ – ಬಳಗಾರ್ ತಿರುವು ಪ್ರದೇಶದಲ್ಲಿ ಆ ತುಪಾನ್ ಕ್ರುಸರ್ ಲಾರಿಗೆ ಡಿಕ್ಕಿ ಹೊಡೆಯಿತು.
ಈ ಡಿಕ್ಕಿಯ ರಭಸಕ್ಕೆ ತುಪಾನ್ ಚಾಲಕ ಸಂಜೀವ ಮೈಲಾರ ಅಂಗಡಿ ಅಲ್ಲಿಯೇ ಸಾವನಪ್ಪಿದರು. ಅವರ ಜೊತೆಯಿದ್ದ ಧಾರವಾಡ ಸಾಧನಕೇರಿಯ ಅಕ್ಷಯ ತೇಜಪ್ಪ ಮುರಳವರ್ (26), ಧಾರವಾಡ ಜಯನಗರದ ಅಭಿಷೇಕ ಈಶ್ವರ (28), ಅದೇ ಊರಿನ ಅಭಿಷೇಕ ಮಲ್ಲೇಶ ಮಡಬಾವಿ (27), ಧಾರವಾಡ ಜೆಎಸ್‌ಎಸ್ ಕ್ಯಾಂಪಸ್ ಬಳಿಯ ಬಸಪ್ಪ ದೇವಪ್ಪ ಕನಕವರ್ (38) ಧಾರವಾಡ ಮುರುಘಾಮಠದ ಮಂಜುನಾಥ ಅಶೋಕ ಚುಳಕಿ (33) ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಧಾರವಾಡ ಮೆಹಬೂಬನಗರದ ಸಚೀನ್ (26) ಅವರು ಆಸ್ಪತ್ರೆಗೆ ಕರೆದೊಯ್ಯುವಾಗ ಉಸಿರು ನಿಲ್ಲಿಸಿದರು.
ಧಾರವಾಡದ ನರಗುಂದದ ಶಿವರಾಜ ಗುರಪ್ಪ ಮಡಿವಾಳರ (22) ಹಾಗೂ ಕಲಘಟಗಿಯ ಚನ್ನಬಸು ಬಸವಲಿಂಗಯ್ಯ ಸಂಪಗಾವಿಮಠ್ (28) ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
`ನಿಧಾನವಾಗಿ ವಾಹನ ಓಡಿಸಿ. ಸುರಕ್ಷತಾ ನಿಯಮಗಳನ್ನು ಪಾಲಿಸಿ’