ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾಗಿದ್ದ ಲಾರಿ ಚಾಲಕ ಕಳೆದ 14 ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದು, ಆಧುನಿಕ ತಂತ್ರಜ್ಞಾನದ ಆಧಾರದಲ್ಲಿ ಅಂಕೋಲಾ ಪೊಲೀಸರು ಆ ಚಾಲಕನನ್ನು ಹುಡುಕಿದ್ದಾರೆ. ಕೇರಳಕ್ಕೆ ಹೋಗುವ ಪ್ರಯತ್ನದಲ್ಲಿದ್ದ ಬೆಳಗಾವಿಯ ರಫಿಕ್ ಅಹ್ಮದ್ ಅವರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.
2012ರ ನವೆಂಬರ್ 28ರಂದು ಅಂಕೋಲಾದ ಸುಂಕಸಾಳದ ಬಳಿ ಅಪಘಾತವೊಂದು ನಡೆದಿತ್ತು. ರಫಿಕ್ ಅಹ್ಮದ್ ಓಡಿಸುತ್ತಿದ್ದ ಲಾರಿ ಸ್ಕಾರ್ಪಿಯೋ ಕಾರಿಗೆ ಗುದ್ದಿತ್ತು. ಪರಿಣಾಮ ಕಾರಿನಲ್ಲಿದ್ದ ಲೋಪಸೂನ್ ಪ್ರೋಟಿನ್ ಡಾರಗೋಳ ಎಂಬಾತರು ಸಾವನಪ್ಪಿದ್ದರು. ಜೊತೆಗೆ ಆ ಕಾರಿನಲ್ಲಿದ್ದ ಟೆನನ್ ಯೋನವೆನ್ ಹಾಗೂ ತೂಟೆನ್ ಪ್ಲೇರಿಂಗ ಎಂಬಾತರು ಗಾಯಗೊಂಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಆರೋಪಿಯನ್ನು ಬಂಧಿಸಿದ್ದರು. ಜಾಮೀನುಪಡೆದ ಆರೋಪಿ ರಫಿಕ್ ಅಹ್ಮದ್ ತಲೆಮರೆಸಿಕೊಂಡಿದ್ದರು. ನಾನಾ ವೇಷ ಧರಿಸಿ ಸಂಚರಿಸುತ್ತಿದ್ದ ಅವರು ಪೊಲೀಸರಿಗೆ ಸಿಗದೇ ಯಾಮಾರಿಸುತ್ತಿದ್ದರು.
ರಫಿಕ್ ಅಹ್ಮದ್ ಖಾಯಂ ವಿಳಾಸದಲ್ಲಿ ವಾಸವಾಗಿರಲಿಲ್ಲ. ಪದೇ ಪದೇ ಮನೆ ಬದಲಿಸುತ್ತಿದ್ದರು. ನ್ಯಾಯಾಲಯಕ್ಕೆ ಹಾಜರಾಗದ ಕಾರಣ ವಾರೆಂಟ್ ಜಾರಿಯಾದರೂ ರಫಿಕ್ ಅಹ್ಮದ್ ಅವರು ಸಿಕ್ಕಿರಲಿಲ್ಲ. ಹೀಗಾಗಿ ಅಂಕೋಲಾ ಪೊಲೀಸರು ಆರೋಪಿ ಬಂಧನಕ್ಕೆ ಸಾಕಷ್ಟು ಕಸರತ್ತು ನಡೆಸಿದ್ದು, ಜುಲೈ 10 ರಂದು ಹುಬ್ಬಳ್ಳಿಯಿಂದ ಕೇರಳದ ಕಡೆಗೆ ರಫಿಕ್ ಅಹ್ಮದ್ ಲಾರಿ ಚಾಲಕನಾಗಿ ತೆರಳುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಬಾಳೆಗುಳಿ ಕ್ರಾಸಿನಲ್ಲಿ ಕಾದು ಕುಳಿತ ಪೊಲೀಸರು ಆ ಲಾರಿ ಬಂದ ತಕ್ಷಣ ಅದಕ್ಕೆ ಮುತ್ತಿಗೆ ಹಾಕಿದರು. ರಫಿಕ್ ಅಹ್ಮದ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು. ನ್ಯಾಯಾಲಯ ರಫಿಕ್ ಅಹ್ಮದ್ ಅವರಿಗೆ ನ್ಯಾಯಾಂಗ ಬಂಧನವಿಧಿಸಿದೆ. ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಅವರ ಜೊತೆ ಪಿಸೈ ಸುನೀಲ ಹುಲ್ಲೋಳ್ಳಿ, ಎಎಸ್ಐ ದೇವಿದಾಸ ಚಾಪೋಲೇಕರ, ಸಿಬ್ಬಂದಿ ಮೋಹನ ಗೌಡ, ಮಹಾದೇವ ಸಿದ್ದಿ, ರಮೇಶ್ ತುಂಗಳ, ರಯೀಸ್ ಬಾಗವಾನ ಹಾಗೂ ಉಮೇಶ್ ಗಾಳಿ ಈ ಕಾರ್ಯಾಚರಣೆಯಲ್ಲಿದ್ದರು.