`ಶಿರಸಿ ಹಾಗೂ ಮುಂಡಗೋಡಿನ ಪೆಟ್ರೋಲ್ ಬಂಕ್’ಗಳಲ್ಲಿ ಸಿಬಿಜಿ ವಿತರಣೆ ನಡೆದಿದ್ದು, ಅದನ್ನು ನಿಲ್ಲಿಸಿ ಸಿಎನ್‌ಜಿ ಪೂರೈಕೆ ಮಾಡಬೇಕು’ ಎಂದು ಆಟೋ-ರಿಕ್ಷಾ ಚಾಲಕ ಮತ್ತು ಮಾಲಕ ಸಂಘದವರು ಆಗ್ರಹಿಸಿದ್ದಾರೆ. ಮಂಗಳವಾರ ಕಾರವಾರಕ್ಕೆ ಆಗಮಿಸಿದ್ದ ಸಂಘದ ಪದಾಧಿಕಾರಿಗಳು ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
`ಸಿಬಿಜಿ ಅನಿಲದ ಬಳಕೆಯಿಂದ ವಾಹನಗಳಲ್ಲಿ ತೀವ್ರ ದುರ್ವಾಸನೆ ಬರುತ್ತಿದೆ. ರಿಕ್ಷಾದ ಎಂಜಿನ್‌ಗಳು ಪದೇ ಪದೇ ಹಾಳಾಗುತ್ತಿದೆ. ಅದರಿಂದ ಪ್ರಯಾಣಿಕರು ರಿಕ್ಷಾ ಹತ್ತಲು ಹಿಂಜರಿಯುತ್ತಿದ್ದು, ದುರಸ್ಥಿ ವೆಚ್ಚವೂ ದುಬಾರಿಯಾಗಿದೆ’ ಎಂದು ವಿಶ್ವನಾಥ ಗೌಡ ಅವರು ವಿವರಿಸಿದರು. `ವಾಹನಗಳ ಆರ್‌ಸಿ ಬುಕ್‌ನಲ್ಲಿ ಸಿಎನ್‌ಜಿ ಬಳಕೆಗೆ ಮಾತ್ರ ಅನುಮತಿ ಇದ್ದರೂ ಬಂಕ್ ಸಿಬ್ಬಂದಿ ಸಿಬಿಜಿ ಹಾಕುತ್ತಿದ್ದಾರೆ. ಬೇರೆ ಎಲ್ಲಿಯೂ ಇಲ್ಲದ ನಿಯಮ ಶಿರಸಿ ಹಾಗೂ ಮುಂಡಗೋಡಿನಲ್ಲಿದೆ’ ಎಂದವರು ದೂರಿದರು.
`ಒಂದು ವಾರದೊಳಗೆ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆಟೋ ಹಾಗೂ ಟಾಕ್ಸಿ ಸೇವೆ ಬಂದ್ ಮಾಡಲಾಗುತ್ತದೆ. ಜೊತೆಗೆ ಪ್ರತಿಭಟನೆಯನ್ನು ಆಯೋಜಿಸಲಾಗುತ್ತದೆ’ ಎಂದು ಎಚ್ಚರಿಸಿದರು. ಪ್ರಮುಖರಾದ ಉದಯ ನಾಯ್ಕ, ರಾಘು ಗೌಳಿ, ಶಾನ್ ಪಠಾಣ, ವಿನಾಯಕ ಶಿರಸಿ, ಪ್ರದೀಪ್ ಪವಾರ್, ಮಹೇಶ್ ನಾಯ್ಕ, ಅರುಣ ಇತರರಿದ್ದರು.