ಮೋಜು-ಮಸ್ತಿಗಾಗಿ ಯಲ್ಲಾಪುರ ಪ್ರವಾಸ ಮಾಡಿದ ಬಾಲಕನೊಬ್ಬ ಬೈಕ್ ಓಡಿಸಿದ್ದು, ಆ ಬೈಕನ್ನು ಪೊಲೀಸರು ಜಪ್ತು ಮಾಡಿದ್ದಾರೆ. ನ್ಯಾಯಾಲಯ ಸೂಚಿಸಿದ 25 ಸಾವಿರ ರೂ ದಂಡ ಕಟ್ಟಿದ ನಂತರ ಆ ಬಾಲಕನ ಪಾಲಕ ಬೈಕ್ ಬಿಡಿಸಿಕೊಂಡಿದ್ದಾರೆ.
ಹುಬ್ಬಳ್ಳಿಯ ಅರವಿಂದ ದತ್ತಾತ್ರೇಯ ಪವಾರ್ ಅವರು ಕಾರವಾರ ರಸ್ತೆ ಅಂಚಿನಲ್ಲಿ ಮನೆ ಮಾಡಿಕೊಂಡಿದ್ದಾರೆ. ಅವರ ಮಗ ಕಾಲೇಜು ಕಲಿಯುತ್ತಿದ್ದು, ತಂದೆಗೂ ಗೊತ್ತಿಲ್ಲದ ಹಾಗೇ ಬೈಕ್ ಓಡಿಸುತ್ತಾರೆ. ವಾರದ ಹಿಂದೆ ಆ ಬಾಲಕ ಅದೇ ಬೈಕು ಏರಿ ಯಲ್ಲಾಪುರಕ್ಕೆ ಬಂದಿದ್ದಾರೆ. ಸ್ನೇಹಿತರ ಜೊತೆ ಬಂದಿದ್ದ ಬಾಲಕನನ್ನು ಕೋಳಿಕೆರೆ ಬಳಿ ಪೊಲೀಸರು ತಡೆದಿದ್ದಾರೆ.
ಈ ವೇಳೆ ಪಿಸೈ ಸಿದ್ದಪ್ಪ ಗುಡಿ ಅವರು ಬೈಕಿನ ದಾಖಲೆಗಳನ್ನು ಕೇಳಿದ್ದಾರೆ. ಜೊತೆಗೆ ಬೈಕ್ ಓಡಿಸುತ್ತಿದ್ದವನ ಲೈಸನ್ಸ್ ಪ್ರಶ್ನಿಸಿದ್ದಾರೆ. ಜೊತೆಗೆ ಆಧಾರ್ ಕಾರ್ಡ ನೋಡಿದ್ದಾರೆ. ಇನ್ನೂ 18 ವರ್ಷ ಆಗದ ಕಾರಣ ಬೈಕ್ ಓಡಿಸುವವನ ಬಳಿ ಲೈಸನ್ಸ್ ಇರದಿರುವುದು ಗೊತ್ತಾಗಿದೆ. ಪರವಾನಿಗೆ ಇಲ್ಲದೇ ಬೈಕ್ ಓಡಿಸಿದ ಕಾರಣ ಆ ಬೈಕನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಅದಾದ ನಂತರ ನಿಯಮಾನುಸಾರ ಬೈಕ್ ವಶಕ್ಕೆಪಡೆದ ಬಗ್ಗೆ ಪೊಲೀಸರು ಕೋರ್ಟಿಗೆ ಮಾಹಿತಿ ನೀಡಿದ್ದಾರೆ. ಈ ಕೇಸಿನ ವಿಚಾರಣೆ ನಡೆಸಿದ ನ್ಯಾಯಾಧೀಶೆ ಅನಿತಾಕುಮಾರಿ ಅವರು ಬೈಕ್ ಓಡಿಸಿದ ಬಾಲಕನ ಪಾಲಕರನ್ನು ಕೋರ್ಟಿಗೆ ಕರೆಯಿಸಿದ್ದಾರೆ. ಮಕ್ಕಳಿಗೆ ಬೈಕ್ ನೀಡದಂತೆ ಎಚ್ಚರಿಕೆ ನೀಡಿದ ನ್ಯಾಯಾಧೀಶರು ಮಾಡಿದ ತಪ್ಪಿಗೆ 25 ಸಾವಿರ ರೂ ದಂಡ ಪಾವತಿಸುವಂತೆ ಆದೇಶಿಸಿದ್ದಾರೆ. ಆ ದಂಡ ಪಾವತಿಸಿದ ನಂತರ ಅರವಿಂದ ಪವಾರ್ ಅವರು ಬೈಕನ್ನು ಮನೆಗೆ ಒಯ್ದಿದ್ದಾರೆ.