ಯಲ್ಲಾಪುರ-ಮಂಚಿಕೇರಿ ಮಾರ್ಗವಾಗಿ ಓಡಾಡುವ ಶಾಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸಿಗುತ್ತಿಲ್ಲ. ಈ ಸಮಸ್ಯೆ ಬಗ್ಗೆ ಅಹಿಂದ್ ವೇದಿಕೆ ಅಧ್ಯಕ್ಷ ದ್ಯಾಮಣ್ಣ ಬೋವಿವಡ್ಡರ್ ಧ್ವನಿ ಎತ್ತಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್ ಬಿಡುವಂತೆ ಆಗ್ರಹಿಸಿದ್ದಾರೆ.
`ಪ್ರತಿ ದಿನ ಮಂಚಿಕೇರಿಯಿoದ ಯಲ್ಲಾಪುರಕ್ಕೆ ಅನೇಕ ವಿದ್ಯಾರ್ಥಿಗಳು ಬರುತ್ತಾರೆ. ಈ ಮಾರ್ಗದಲ್ಲಿ ಓಡಾಡುವ ಎಲ್ಲಾ ಬಸ್ಸುಗಳು ಭರ್ತಿಯಾಗುತ್ತಿದ್ದು, ಅಂಥ ಬಸ್ಸುಗಳಲ್ಲಿ ನಿಲ್ಲಲು ಸಹ ಜಾಗ ಸಿಗುತ್ತಿಲ್ಲ. ತರಗತಿ ತಪ್ಪಿಸಿಕೊಳ್ಳಲು ಇಚ್ಚಿಸದ ಮಕ್ಕಳು ಜೀವದ ಹಂಗು ತೊರೆದು ಚಲಿಸುತ್ತಿದ್ದಾರೆ. ಜೊತೆಗೆ ಬಸ್ಸಿನಲ್ಲಿ ಬರುವ ಹೆಣ್ಣು ಮಕ್ಕಳು ವಿವಿಧ ಸಮಸ್ಯೆ ಅನುಭವಿಸುತ್ತಿದ್ದು, ಅದಕ್ಕೆಲ್ಲವೂ ಪರಿಹಾರ ಅಗತ್ಯ’ ಎಂದು ದ್ಯಾಮಣ್ಣ ಬೋವಿವಡ್ಡರ್ ಅವರು ಒತ್ತಾಯಿಸಿದ್ದಾರೆ.
`ತೂಕದಬೈಲ್, ಹೊಂಡಗದ್ದೆ, ಮಳಲಗಾಂವ್, ಜಂಬೆಸಾಲ್, ಉಪಳೇಸ್ವರ, ಹುತ್ಕಂಡ ಭಾಗದ ಮಕ್ಕಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಆ ಸಮಸ್ಯೆ ದೂರ ಮಾಡುವುದಕ್ಕಾಗಿ ಮಂಚಿಕೇರಿಯಿoದ ಪ್ರತಿದಿನ ಬೆಳಗ್ಗೆ 8.30ಕ್ಕೆ ಹಾಗೂ ಯಲ್ಲಾಪುರದಿಂದ ಸಂಜೆ 4.45ಕ್ಕೆ ಬಸ್ ಬಿಡಬೇಕು’ ಎಂದವರು ಮನವಿ ಮಾಡಿದ್ದಾರೆ. ಈ ಬೇಡಿಕೆ ಈಡೇರದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. ಡಿಪೋ ಮ್ಯಾನೇಜರ್ ಸಂತೋಷ ವರ್ಣೇಕರ್ ಅವರು ಮನವಿ ಸ್ವೀಕರಿಸಿದ್ದು, ದ್ಯಾಮಣ್ಣ ಅವರ ಹೋರಾಟಕ್ಕೆ ಈಶ್ವರ ಪಟಗಾರ, ಸಂತೋಷ ಹೆಗಡೆ, ನರಸಿಂಹ ಸಿದ್ದಿ, ಈರಪ್ಪ ಬೋವಿವಡ್ಡರ್, ಯೋಗೇಶ ನಾಯ್ಕ ಹಾಗೂ ಕೃಷ್ಣ ನಾಯ್ಕ ಅವರು ಬೆಂಬಲ ನೀಡಿದ್ದಾರೆ.