ಸಾಮಾಜಿಕ, ಶೈಕ್ಷಣಿಕ ಹಾಗೂ ಪರಿಸರ ಚಟುವಟಿಕೆಗಳ ಮೂಲಕ ಪ್ರಸಿದ್ಧಿಪಡೆದಿರುವ ಯಲ್ಲಾಪುರದ ಆಶಿಯಾ ಸಮಾಜ ಸೇವಾ ಸಂಸ್ಥೆಯವರು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಪರಿಶಿಷ್ಟ ಸಮುದಾಯದವರನ್ನು ಭೇಟಿ ಮಾಡಿದ್ದಾರೆ. ಆ ಸಮುದಾಯದವರ ಹಕ್ಕು ಹಾಗೂ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿ, ಕಾನೂನು ವಿಷಯಗಳ ಬಗ್ಗೆಯೂ ಅರಿವು ಮೂಡಿಸಿದ್ದಾರೆ.
ಆಶಿಯಾ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ ಈ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಯಲ್ಲಾಪುರದ ಅಂಬೇಡ್ಕರ್ ಸೇವಾ ಸಂಘದ ಉಪಾಧ್ಯಕ್ಷ ಅನಿಲ ಮರಾಠೆ ಅವರು ಭಾಗವಹಿಸಿದ್ದರು. ಅವರು ಕಣ್ಣಿಗೇರಿ, ಲಾಲಗುಳಿ ತಿರುವಿನ ಪ್ರದೇಶದಲ್ಲಿರುವ ಹಿಂದುಳಿದ ಸಮುದಾಯದವರ ಜೀವನ ಅಧ್ಯಯನ ನಡೆಸಿದರು. ಅಲ್ಲಿರುವ ಪರಿಶಿಷ್ಟ ಸಮುದಾಯದ ಅನೇಕ ಕುಟುಂಬದವರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಅಧಿನಿಯಮ ಹಾಗೂ ಅಸ್ಪೃಶ್ಯತೆ ನಿರ್ಮೂಲನೆಗೆ ಸಂಬAಧಿಸಿದ ಕಾನೂನುಗಳ ಕುರಿತು ಅವರಿಗೆ ಅರಿವು ಮೂಡಿಸಿದರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಗಳ ಅಭಿವೃದ್ಧಿ ಮತ್ತು ಜೀವನಮಟ್ಟ ಸುಧಾರಣೆಗೆ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಅದಕ್ಕೆ ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ಚರ್ಚಿಸಿದರು. ಸೌಲಭ್ಯ ಹಾಗೂ ಹಕ್ಕುಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಸರ್ಕಾರದ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಸಾಮಾಜಿಕ ಅಭಿವೃದ್ಧಿಯ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಅವರು ಕರೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ವಿಜಯ ನಾಯಕ , ಪದಾಧಿಕಾರಿಗಳಾದ ವಿಜಯಲಕ್ಷ್ಮೀ, ಶೈಲ ನಾಯರ್ ಅವರು ಕ್ಷೇತ್ರ ಭೇಟಿ ನಡೆಸಿದರು.