ಸರ್ಕಾರಿ ದಾಖಲೆಗಳಲ್ಲಿ ಸಾವನಪ್ಪಿದವರ ವಿವರ ದಾಖಲಿಸುವಾಗ ತಪ್ಪಾಗಿ ಬದುಕಿದವರ ಆಧಾರ್ ಸಂಖ್ಯೆ ನಮೂದಿಸಿದರೆ ಆ ಬದುಕಿದ ವ್ಯಕ್ತಿಗೆ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ `ಮರಣ ವಿಷಯ ದಾಖಲಿಸುವಾಗ ಸಾವನಪ್ಪಿದ ವ್ಯಕ್ತಿಯ ಆಧಾರ್ ಸಂಖ್ಯೆ ಸರಿಯಾಗಿ ನಮೂದಿಸಬೇಕು’ ಎಂದು ಜನನ-ಮರಣ ನೋಂದಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಸೂಚನೆ ನೀಡಿದ್ದಾರೆ.
ಸೋಮವಾರ ಜನನ ಮರಣ ನೋಂದಣಿ ಸಮನ್ವಯ ಸಮಿತಿ ಸಭೆ ನಡೆಸಿದ ಅವರು `ಮರಣ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಮೃತ ವ್ಯಕ್ತಿಯ ಬದಲಾಗಿ ಜೀವಂತ ವ್ಯಕ್ತಿಯ ಆಧಾರ್ ಸಂಖ್ಯೆ ನಮೂದಿಸಿದಲ್ಲಿ ಜೀವಂತ ಇರುವ ವ್ಯಕ್ತಿಯು ವಿವಿಧ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಅಂಥ ಘಟನೆಗೆ ಅವಕಾಶ ನೀಡದೇ ಮೃತರ ಹೆಸರು, ವಿಳಾಸ ಆಧಾರ್ ಸಂಖ್ಯೆಯನ್ನು ದಾಖಲಿಸುವಲ್ಲಿ ಎಚ್ಚರಿಕೆವಹಿಸಬೇಕು’ ಎಂದು ಸೂಚಿಸಿದರು. ಅದಾಗಿಯೂ, ಮರಣ ವ್ಯಕ್ತಿಗೆ ಜೀವಂತ ವ್ಯಕ್ತಿಯ ಆಧಾರ್ ಸಂಖ್ಯೆ ದಾಖಲಿಸಿದ್ದು ಗೊತ್ತಾದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಸಿದರು.
`ಜನನ ಮತ್ತು ಮರಣ ನೋಂದಣಿಗೆ ಸಂಬoಧಿಸಿದoತೆ ನೋಂದಣಾಧಿಕಾರಿಗಳು ಕೈಗೊಂಡ ಯಾವುದೇ ಕ್ರಮ ಆಥವಾ ಆದೇಶದಿಂದ ಸಾರ್ವಜನಿಕರು ಅಸಮಧಾನ ಹೊಂದಿದ್ದಲ್ಲಿ ಈ ಬಗ್ಗೆ ಮೇಲ್ಮನವಿ ಸಲ್ಲಿಸಬಹುದಾಗಿದ್ದು, ಈ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕು. ಅಲಭ್ಯ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿದರು. `ಮರಣ ಘಟನೆಗಳಿಗೆ ಸಂಬoಧಿಸಿದoತೆ ಪ್ರತಿಯೊಂದು ಮರಣ ಕಾರಣವನ್ನು ವೈದ್ಯಕೀಯ ಪ್ರಮಾಣ ಪತ್ರದ ವರದಿ ನಮೂನೆಯನ್ನು ಇ-ಜನ್ಮ ತಂತ್ರಾ0ಶದಲ್ಲಿ ಅಪ್ಲೋಡ್ ಮಾಡುವುದರ ಜೊತೆಗೆ ಮರಣದ ಕಾರಣವನ್ನು ನಮೂದಿಸಿ ನೋಂದಣಿ ಮಾಡಬೇಕು. ಎಲ್ಲಾ ಜನನ ಮರಣ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಡಿಜಿಟಲ್ ಸಹಿಯೊಂದಿಗೆ ವಿತರಿಸಬೇಕು. ಮನೆಗಳಲ್ಲಿ ಸಂಭವಿಸುವ ಮರಣ ಘಟನೆಗಳನ್ನು ವಿಳಂಬಕ್ಕೆ ಆಸ್ಪದ ನೀಡದಂತೆ ನಿಗಧಿತ ಅವಧಿಯೊಳಗೆ ನೋಂದಣಿ ಮಾಡಲು ಕ್ರಮ ಕೈಗೊಳ್ಳಬೇಕು. ತಾಲೂಕುಗಳಲ್ಲಿ ತಾಲೂಕು ಸಮನ್ವಯ ಸಮಿತಿ ಸಭೆಗಳನ್ನು ಪ್ರತಿ ತಿಂಗಳು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಸಬೇಕು’ ಎಂದರು.
`ತಾಲೂಕು ಮಟ್ಟದಲ್ಲಿ ಜನನ ಮರಣ ನೋಂದಣಿಯು ವ್ಯವಸ್ಥಿತವಾಗಿ ನಡೆಯುತ್ತಿರುವ ಕುರಿತಂತೆ ಪರಿಶೀಲಿಸಲು ಪ್ರತೀ ತಿಂಗಳು ನೋಂದಣಿ ಘಟಕಗಳ ತಪಾಸಣೆಗಳನ್ನು ಕೈಗೊಳ್ಳಬೇಕು. ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂರಕ್ಷಣಾಧಿಕಾರಿಗಳು, ನೋಂದಣಾಧಿಕಾರಿ, ಉಪನೋಂದಣಾಧಿಕಾರಿ, ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಜನನ ಮರಣ ದಾಖಲಾತಿ ನಿರ್ವಹಿಸುವ ಆಪರೇಟರ್‌ಗಳಿಗೆ ತರಬೇತಿಯನ್ನು ಅಯೋಜಿಸಬೇಕು’ ಎಂದು ತಿಳಿಸಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ್ ಮೇಸ್ತಾ ಅವರು ಸಭೆಯಲ್ಲಿದ್ದರು.