ಯಲ್ಲಾಪುರದ ಹೊಸಳ್ಳಿಯಲ್ಲಿ ಗಣೇಶೋತ್ಸವದ ಅಂಗವಾಗಿ ನಡೆಯುವ ಅನ್ನದಾನಕ್ಕೆ ಹೋಳಿಗೆ ಮಾಡಿಸಲು ಸಮಿತಿಯವರು ನಿರ್ಧರಿಸಿದ್ದು, ಕೊನೆಕ್ಷಣದಲ್ಲಿ ಆ ನಿರ್ಧಾರ ಬದಲಾಗಿತ್ತು. ಆದರೆ, ಅನ್ನ ಸಂತರ್ಪಣೆ ನಡೆಯುವಾಗ ಅಲ್ಲಿಗೆ ಬಂದ ಮೂರು ವರ್ಷದ ಬಾಲಕಿಯೊಬ್ಬರು `ಹೋಳಿಗೆಯೇ ಬೇಕು’ ಎಂದು ಪಟ್ಟುಹಿಡಿದಿದ್ದು, ಆ ಬೇಡಿಕೆ ಮನ್ನಿಸಿದ ಸಮಿತಿಯವರು ಹೋಳಿಗೆ ಮಾಡಿಸಿ ದೇವರಿಗೆ ನೈವೇದ್ಯ ಮಾಡಿದ್ದಾರೆ. ಅದಾದ ನಂತರ ಅಲ್ಲಿ ಆಗಮಿಸಿದ ಭಕ್ತರಿಗೂ ಹೋಳಿಗೆ ಪ್ರಸಾದ ಬಡಿಸಿದ್ದಾರೆ.
ಯಲ್ಲಾಪುರದ ಕಿರವತ್ತಿ ಬಳಿಯ ಹೊಸಳ್ಳಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಗಣೇಶ ಉತ್ಸವ ನಡೆಯುತ್ತಿದೆ. ಇಲ್ಲಿನ ಸಾರ್ವಜನಿಕ ಗಜಾನನ ಉತ್ಸವ ಸಮಿತಿಯವರು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಗಣೇಶ ಹಬ್ಬ ಆಚರಿಸುತ್ತ ಬಂದಿದ್ದಾರೆ ಉತ್ಸವದ ಒಂದು ದಿನ ಅನ್ನದಾನ ಸೇವೆ ನಡೆಯುತ್ತಿದೆ. ಪ್ರತಿ ವರ್ಷವೂ ಒಂದೊoದು ಬಗೆಯ ಸಿಹಿ ತಿನಿಸು ಬಡಿಸಲಾಗುತ್ತದೆ. ಅದರಂತೆ, ಈ ವರ್ಷ ಹೋಳಿಗೆ ಮಾಡಿಸಿ ಅದನ್ನು ಗಣೇಶನಿಗೆ ನೈವೇದ್ಯ ಮಾಡುವ ಬಗ್ಗೆ ಸಮಿತಿಯವರು ನಿರ್ಧರಿಸಿದ್ದರು. 10 ದಿನಗಳಿಂದ ಅದೇ ವಿಷಯವಾಗಿ ಚರ್ಚೆ ನಡೆದಿತ್ತು. ಅನ್ನದಾನದ ವೇಳೆಯೂ ಎಲ್ಲರಿಗೂ ಹೋಳಿಗೆ ಪ್ರಸಾದ ವಿತರಿಸಲು ನಿರ್ಣಯಿಸಿದ್ದರು. ಆದರೆ, ಸಾವಿರಕ್ಕೂ ಅಧಿಕ ಜನ ಅನ್ನದಾನದಲ್ಲಿ ಭಾಗಿಯಾಗುವುದರಿಂದ ಏಕಕಾಲಕ್ಕೆ ಎಲ್ಲರಿಗೂ ಹೋಳಿಗೆ ಮಾಡಿ ಬಡಿಸುವುದು ಸವಾಲಾಗಿತ್ತು. ಈ ಹಿನ್ನಲೆ ಹೋಳಿಗೆ ಊಟ ಮಾಡಿಸುವ ನಿರ್ಣಯ ಜಾರಿಗೆ ಬಂದಿರಲಿಲ್ಲ. ಹೀಗಾಗಿ ಗಣಪನಿಗೆ ಸಹ ಹೋಳಿಗೆ ನೈವೇದ್ಯ ಸಾಧ್ಯವಾಗಿರಲಿಲ್ಲ.
ಶನಿವಾರ ಹೊಸಳ್ಳಿಯ ಸಾರ್ವಜನಿಕ ಗಜಾನನ ಉತ್ಸವ ಸಮಿತಿಯವರು ಎಂದಿನAತೆ ದೇವತಾ ಕಾರ್ಯ ಮುಗಿಸಿದರು. ಗಣೇಶಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಬೇರೆ ಸಿಹಿ ತಿನಿಸು ನೈವೇದ್ಯ ಮಾಡಿದರು. ಅದಾದ ನಂತರ ಅನ್ನದಾನ ನಡೆದಿದ್ದು, ಆ ವೇಳೆ ಹದ್ದಿನಸರದ ಮೂರು ವರ್ಷದ ಬಾಲಕಿಯೊಬ್ಬರು ಅಲ್ಲಿ ಹಾಜರಾದರು. ಪಾಲಕರ ಜೊತೆ ಮೂರು ಕಿಮೀ ದೂರದಿಂದ ನಡೆದು ಬಂದಿದ್ದ ಆ ಬಾಲಕಿ `ನನಗೆ ಹೋಳಿಗೆಯೇ ಬೇಕು’ ಎಂದು ಪಟ್ಟುಹಿಡಿದಿದ್ದು, ಅನೇಕರು ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. ಎರಡೆರಡು ಐಸ್ ಕ್ರೀಂ ಕೊಡಿಸಿದರೂ ಬಾಲಕಿ ಮಾತ್ರ ಸಮಾಧಾನ ಆಗಲಿಲ್ಲ. ಒಂದಷ್ಟು ಹಣ್ಣು ತಂದು ಕೊಟ್ಟರೂ ಬಾಲಕಿಯ ಅಳು ನಿಲ್ಲಲಿಲ್ಲ. `ಹಬ್ಬದ ದಿನ ಹೋಳಿಗೆ ಮಾಡಲಿಲ್ಲ’ ಎಂದು ಬಾಲಕಿ ಅಳಲು ಶುರು ಮಾಡಿದ್ದು, ಗಣೇಶ ಉತ್ಸವ ಸಮಿತಿಯವರು ಪೇಚಿಗೆ ಸಿಲುಕಿದರು. ಈ ದಿನ ಹೋಳಿಗೆ ಮಾಡುವ ಬಗ್ಗೆ ನಿರ್ಧರಿಸಿ, ನಂತರ ಆ ನಿರ್ಣಯ ಬದಲಾಗಿದ್ದು ಸಮಿತಿಯವರಿಗೆ ನೆನಪಾಯಿತು. ಆ ಬಾಲಕಿ ಮೂಲಕ ದೇವರೇ ಹೋಳಿಗೆಯ ಬೇಡಿಕೆಯಿಡುತ್ತಿರುವ ಬಗ್ಗೆ ಭಾವಿಸಿದ ಸಮಿತಿಯವರು `ಯಾರ ಮನೆಯಲ್ಲಾದರೂ ಹೋಳಿಗೆ ಮಾಡಿದ್ದರೆ ದಯವಿಟ್ಟು ಕೊಡಿ’ ಎಂದು ಮೈಕಿನಲ್ಲಿ ಕೂಗಿದರು. ಆದರೆ, ಎಲ್ಲಿ ಹುಡುಕಿದರೂ ಹೋಳಿಗೆ ಸಿಗಲಿಲ್ಲ.
`ಹೋಳಿಗೆ ಮಾಡಲು ನಿರ್ಧರಿಸಿದ್ದರಂತೆ. ನಂತರ ಆ ನಿರ್ಣಯ ಬದಲಾಯಿತಂತೆ’ ಎಂಬ ವಿಷಯ ಆ ವೇಳೆಗಾಗಲೇ ಊರೆಲ್ಲ ಹಬ್ಬಿತು. `ಈ ಬಾರಿ ಹೋಳಿಗೆ ಮಾಡೋಣ’ ಎಂದು ಸಮಿತಿಯವರು ನಿರ್ಧರಿಸಿ, ನಂತರ ಅದು ಸಾಧ್ಯವಾಗದೇ ಇದ್ದ ಗುಟ್ಟು ರಟ್ಟಾಯಿತು. ದೇವರ ಬೇಡಿಕೆ ಈಡೇರಿಸುವುದಕ್ಕಾಗಿ ಸಮಿತಿಯವರು ಕೂಡಲೇ ಹೋಳಿಗೆ ಮಾಡಿಸಿದರು. ಊರಿನ ಮಹಿಳೆಯರು ಅಲ್ಲಿ ಆಗಮಿಸಿ ಹೋಳಿಗೆ ಸಿದ್ಧಪಡಿಸುವ ಕೆಲಸಕ್ಕೆ ಕೈ ಜೋಡಿಸಿದರು. ಬಿಸಿಬಿಸಿ ಹೋಳಿಗೆ ಸಿದ್ಧವಾದ ನಂತರ ಅದನ್ನು ದೇವರಿಗೆ ನೈವೇದ್ಯ ಮಾಡಿ, ಬಾಲಕಿಗೂ ಉಣಬಡಿಸಿದರು. ಈ ವೇಳೆಗೆ ಸಂಜೆಯಾಗಿದ್ದು, ಅಲ್ಲಿದ್ದ ನೂರಾರು ಜನ ಹೋಳಿಗೆ ಪ್ರಸಾದ ಸ್ವೀಕರಿಸಿದರು.
ಪ್ರತ್ಯಕ್ಷ ವರದಿ: ಸುನೀಲ ಕಾಂಬ್ಳೆ