ಅಂಕೋಲಾದಿoದ ಗೋಕರ್ಣಕ್ಕೆ ನೋಂದಣಿ ಸಂಖ್ಯೆಯೇ ಇಲ್ಲದ ಬಸ್ಸು ಓಡಾಡುತ್ತಿದೆ. ಸರ್ಕಾರಿ ಬಸ್ಸಿಗೆ ನೋಂದಣಿ ಸಂಖ್ಯೆ ಇಲ್ಲದಿರುವುದನ್ನು ನೋಡಿ ಜನ ಆಶ್ಚರ್ಯವ್ಯಕ್ತಪಡಿಸಿದ್ದಾರೆ.
ಈ ಮೊದಲು ಅಂಕೋಲಾ-ಗೋಕರ್ಣ ಮಾರ್ಗವಾಗಿ ಗುಜುರಿ ಬಸ್ ಓಡಾಟ ನಡೆಯುತ್ತಿತ್ತು. ಪದೇ ಪದೇ ಆ ಬಸ್ಸು ಹಾಳಾಗುತ್ತಿತ್ತು. ಅನೇಕ ಬಾರಿ ರಸ್ತೆ ನಡುವೆ ಬಸ್ಸು ಕೆಟ್ಟು ನಿಂತು, ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದರು. ಬಸ್ಸಿನ ಅವ್ಯವಸ್ಥೆಯ ಬಗ್ಗೆ ಜನ ಆಕ್ರೋಶವ್ಯಕ್ತಪಡಿಸಿದ ನಂತರ ಬೇರೆ ಬಸ್ ಬಿಡಲಾಯಿತು. ಆದರೆ, ಗುರುವಾರ ಗೋಕರ್ಣಕ್ಕೆ ಬಂದ ಬಸ್ಸಿಗೆ ನೋಂದಣಿ ಸಂಖ್ಯೆಯಿರಲಿಲ್ಲ. ಇನ್ನೂ ನೋಂದಣಿಯೇ ಆಗದ ಬಸ್ ಬಿಟ್ಟಿರಬಹುದು ಎಂದು ಜನ ಭಾವಿಸಿದ್ದು, ಹತ್ತಿರ ಹೋಗಿ ನೋಡಿದಾಗ ಅದು ಹಳೆಯ ಬಸ್ಸು ಎಂಬುದು ಅರಿವಾಯಿತು. ಆದರೆ, ಆ ಹಳೆಯ ಬಸ್ಸಿಗೂ ನೋಂದಣಿ ಸಂಖ್ಯೆ ಇಲ್ಲದಿರುವ ಬಗ್ಗೆ ಜನ ಪ್ರಶ್ನಿಸಿದರು.
`ಸರ್ಕಾರಿ ಬಸ್ಸುಗಳು ಸಹ ಸಂಚಾರಿ ನಿಯಮ ಪಾಲಿಸಬೇಕು. ಪ್ರಯಾಣಿಕರ ಓಡಾಟಕ್ಕೆ ಉತ್ತಮ ಬಸ್ ಬಿಡುವುದರ ಜೊತೆ ಕಾನೂನನ್ನು ಗೌರವಿಸಬೇಕು’ ಎಂದು ಪ್ರಯಾಣಿಕರು ಹೇಳಿದರು. `ಖಾಸಗಿ ವಾಹನಗಳು ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ. ಸರ್ಕಾರಿ ವಾಹನಗಳ ತಪಾಸಣೆಯೂ ಹಾಗೇ ನಡೆಯಬೇಕು’ ಎಂದು ಒತ್ತಾಯಿಸಿದರು.