ಸ್ವೀಟ್ ಖರೀದಿಗಾಗಿ ಎಲ್ ಎಲ್ ಐಯಂಗಾರ್ ಬೇಕರಿಗೆ ಹೋಗಿದ್ದ ಹಬೀಬ್ ಸಾಬ್ ಅವರು 3 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ಅವರ ಬೈಕಿನಲ್ಲಿದ್ದ 3 ಲಕ್ಷ ರೂ ಹಣವನ್ನು ಕಳ್ಳರು ಅಪಹರಿಸಿದ್ದಾರೆ!
ಶಿರಸಿ ಬನವಾಸಿಯ ಅಂಡಗಿಯಲ್ಲಿ ಹಬೀಬ್ ರೆಹಮಾನ್ ಗಫೂರ ಸಾಬ್ ಅವರು ವಾಸವಾಗಿದ್ದಾರೆ. ಅಗಸ್ಟ 3ರಂದು ಅವರು ಕೆನರಾ ಬ್ಯಾಂಕ್ ಶಾಖೆಗೆ ಹೋಗಿದ್ದಾರೆ. ತಮ್ಮ ಖಾತೆಯಲ್ಲಿದ್ದ 3 ಲಕ್ಷ ರೂ ಹಣವನ್ನು ಹಿಂಪಡೆದಿದ್ದಾರೆ. ಅದಾದ ನಂತರ ಆ ಹಣವನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ, ಬೈಕಿನಲ್ಲಿದ್ದ ಕೈ ಚೀಲಕ್ಕೆ ಹಾಕಿದ್ದಾರೆ. ಪಾಸ್‌ಬುಕ್ ಹಾಗೂ ಚೆಕ್‌ಬುಕ್’ನ್ನು ಸಹ ಅವರು ಅದೇ ಕೈ ಚೀಲದಲ್ಲಿರಿಸಿ ಮನೆ ಕಡೆ ಹೊರಟಿದ್ದಾರೆ.
ದಾಸನಕೊಪ್ಪ ಕ್ರಾಸಿನ ಬಳಿ ಹೋದಾಗ ಅವರಿಗೆ ಮನೆಗೆ `ಸ್ವೀಟ್ ತೆಗೆದುಕೊಂಡು ಹೋಗೋಣ’ ಎನಿಸಿದೆ. ಅದಕ್ಕಾಗಿ ಮತ್ತೆ ಬೈಕ್ ತಿರುಗಿಸಿದ ಅವರು ಪೇಟೆ ಕಡೆ ಹೊರಟಿದ್ದಾರೆ. ಕದಂಬ ಸರ್ಕಲ್ ಬಳಿಯಿರುವ ಎಲ್ ಎಲ್ ಐಯಂಗಾರ್ ಬೇಕರಿ ಮುಂದೆ ಬೈಕ್ ನಿಲ್ಲಿಸಿದ್ದಾರೆ. ಬೇಕರಿಗೆ ಹೋಗಿ ಮರಳುವಷ್ಟರಲ್ಲಿ ಅವರ ಬೈಕಿನ ಹುಕ್ಕಿಗೆ ಸಿಕ್ಕಿಸಿಕೊಂಡಿದ್ದ ಕೈ ಚೀಲ ಕಾಣೆಯಾಗಿದೆ. ಅದರೊಳಗಿದ್ದ ಚೆಕ್, ಪಾಸ್ ಬುಕ್ ಜೊತೆ 3 ಲಕ್ಷ ರೂ ಹಣವೂ ಕಳ್ಳರ ಪಾಲಾಗಿದೆ. ಬ್ಯಾಂಕಿಗೆ ಹೋಗಿದ್ದ ಹಬೀಬ್ ಸಾಬ್ ಅವರು ಸ್ವೀಟ್-ಬ್ರೆಡ್ ಹಿಡಿದು ಮನೆಗೆ ಹೋಗಿದ್ದಾರೆ.