ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ಅವಧಿಯಲ್ಲಿ ಕರಡಿ ಕಾಟ ಕಡಿಮೆಯಾಗಿದ್ದು, ಸದ್ಯ ಮತ್ತೆ ಮನುಷ್ಯನ ಮೇಲೆ ದಾಳಿ ಮಾಡುವ ಪ್ರಸಂಗ ಜೋರಾಗಿದೆ. ನಿತ್ಯದ ದುಡಿಮೆಗಾಗಿ ಹೊಲಕ್ಕೆ ಹೋಗುವವರನ್ನು ಗುರಿಯಾಗಿರಿಸಿಕೊಂಡು ಕರಡಿ ದಾಳಿ ಮಾಡುತ್ತಿದೆ.
ಜೊಯಿಡಾದ ಬಾಮಣಗಿಯಲ್ಲಿಯೂ ಈ ದಿನ ಕರಡಿಯೊಂದು ಮನುಷ್ಯನ ಮೇಲೆ ಆಕ್ರಮಣ ಮಾಡಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ನಡೆಸಿದೆ. ದೊಡ್ಡ ಕರಡಿಯ ಜೊತೆ ಮರಿ ಕರಡಿಯೂ ಆಗಮಿಸಿ ವ್ಯಕ್ತಿಯೊಬ್ಬರ ಮೈ ಪೂರ್ತಿ ಪರಚಿದೆ. ಸೋಮವಾರ ಮಧ್ಯಾಹ್ನದ ವೇಳೆ ಈ ದುರಂತ ನಡೆದಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೊಯಿಡಾದ ಬಾಮಣಗಿ ಗ್ರಾಮದಲ್ಲಿ ಅದೇ ಊರಿನ ದಾವಲ್ ಸಾಬ್ ಗೂಡು ಸಾಬ್ ದೊಡ್ಡಮನಿ (50) ಅವರು ಹೊಲಕ್ಕೆ ಹೋಗಿದ್ದರು. ಈ ವೇಳೆ ಏಕಾಏಕಿ ಅಲ್ಲಿ ಕರಡಿ ಹಾಗೂ ಅದರ ಮರಿ ಆಗಮಿಸಿದ್ದು ದಾವಲ್ ಸಾಬ್ ಅವರನ್ನು ನೆಲಕ್ಕುರುಳಿಸಿತು. ಅದಾದ ನಂತರ ಎರಡು ಕರಡಿ ಸೇರಿ ದಾವಲ್ ಸಾಬ್ ಅವರ ಮೇಲೆ ಆಕ್ರಮಣ ನಡೆಸಿ, ಮೈ ಪೂರ್ತಿ ರಕ್ತ ಬರುವ ಹಾಗೇ ಮಾಡಿತು. ಕರಡಿಯ ದಾಳಿಗೆ ತತ್ತರಿಸಿದ ದಾವಲ್ ಸಾಬ್ ಅವರ ಮುಖ ಹಾಗೂ ಕೈಗಳಿಗೆ ನೋವಾಗಿದೆ. ಕರಡಿ ಜೊತೆ ಹೋರಾಡಿ ಅವರು ಮನೆಗೆ ಸೇರಿದ್ದು, ಕುಟುಂಬದವರು ಸದ್ಯ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಅವರ ಚಿಕಿತ್ಸೆ ನಡೆಯುತ್ತಿದೆ. ಕರಡಿ ದಾಳಿ ಪ್ರಕರಣದಿಂದ ಊರಿನ ಜನ ಕಂಗಾಲಾಗಿದ್ದು, ಭಯದಲ್ಲಿಯೇ ಬದುಕುತ್ತಿದ್ದಾರೆ.