ಹಳಿಯಾಳದ ಪಿಸೈ ಹುದ್ದೆ ಗಿಟ್ಟಿಸಿಕೊಳ್ಳುವುದಕ್ಕಾಗಿ ಲಾಭಿ ನಡೆಸಿದಲ್ಲದೇ, ಫೋನ್ ಮೂಲಕ ಲಂಚದ ಮಾತುಕಥೆ ನಡೆಸಿದ ಮೂವರು ಪಿಸೈ ಅವರನ್ನು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಮನೆಗೆ ಕಳುಹಿಸಿದ್ದಾರೆ. ಕಾನೂನು ಸುವ್ಯವಸ್ಥೆ ವಿಭಾಗದ ಪಿಸೈ ಹುದ್ದೆಗೆ ಬರಲು ಪೈಪೋಟಿ ನಡೆಸಿದ್ದ ಮೂವರು ಪೊಲೀಸ್ ಅಧಿಕಾರಿಗಳು ಅಮಾನತಾಗಿದ್ದಾರೆ.
ಹಳಿಯಾಳ ಪೊಲೀಸ್ ಠಾಣೆಯ ಕಾನೂನು ಹಾಗೂ ಸುವ್ಯವಸ್ಥೆ ಪಿಸೈ ಹುದ್ದೆಗೆ ಬರಲು ಮೂವರು ಅಧಿಕಾರಿಗಳ ನಡುವೆ ಪೈಪೋಟಿ ನಡೆದಿತ್ತು. ಆ ಮೂವರು ಸೇರಿ ಫೋನ್ ಮೂಲಕ ಸಭೆ ಮಾಡಿದ್ದರು. ಕಾನ್ಪರೆನ್ಸ ಕಾಲ್ ಮೂಲಕ ನಡೆದ ಅವರ ಮಾತುಕಥೆಯ ಆಡಿಯೋ ವೈರಲ್ ಆಗಿತ್ತು. ಜೆಡಿಎಸ್ ಪಕ್ಷವೂ ಈ ಪ್ರಕರಣವನ್ನು ಬೆಳಕಿಗೆ ತಂದಿದ್ದು, ಜಾಲತಾಣಗಳ ಮೂಲಕ ಕಾಂಗ್ರೆಸ್ ಆಡಳಿತವನ್ನು ಟೀಕಿಸಿತ್ತು. ಈ ಹಿನ್ನಲೆ ಫೋನ್ ಮೂಲಕ ಲಂಚಾವತಾರದ ಮಾತುಕಥೆ ಮಾಡಿದ್ದ ಹಳಿಯಾಳದ ಪಿಎಸ್‌ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್‌ಐ ಕೃಷ್ಣ ಅರಗೇರಿ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಪಿಎಸ್‌ಐ ಆಗಿದ್ದ ವಿನೋದ್ ರೆಡ್ಡಿ ಅವರು ಅಮಾನತು ಆಗಿದ್ದಾರೆ.
ವರ್ಗಾವಣೆ, ಕಮಿಷನ್ ಹಾಗೂ ರೌಡಿ ಶೀಟರ್ ಆಗಿರುವ ವ್ಯಕ್ತಿಯೊಬ್ಬರು ಕೊಡಬೇಕಾದ ಹಣದ ಬಗ್ಗೆ ಈ ಮೂವರ ನಡುವೆ ಮಾತುಕಥೆ ನಡೆದಿತ್ತು. ತಮ್ಮ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವುದಕ್ಕಾಗಿ ಅವರೆಲ್ಲರೂ ಮಾತನಾಡಿಕೊಂಡಿದ್ದರು. ಮೇಲಧಿಕಾರಿಗಳಿಗೆ ನೀಡಬೇಕಾದ ಲಂಚದ ವಿಷಯವಾಗಿಯೂ ಫೋನ್ ರೆಕಾರ್ಡನಲ್ಲಿ ಉಲ್ಲೇಖವಿದ್ದು, ಈ ವಿಷಯ ಪೊಲೀಸರನ್ನು ಮುಜುಗರಕ್ಕೆ ಸಿಲುಕಿಸಿತ್ತು.
ಈ ಎಲ್ಲಾ ಹಿನ್ನಲೆ ತನಿಖೆ ನಡೆಸಲು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಸೂಚಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಅವರು ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ಆ ವರದಿ ಅನ್ವಯ ಮೂವರು ಪಿಸೈ ಅವರನ್ನು ದೀಪನ್ ಎಂ ಎನ್ ಅವರು ಅಮಾನತು ಮಾಡಿದ್ದಾರೆ.