ಅರಣ್ಯ ಅಂಚಿನ ಪ್ರದೇಶದಲ್ಲಿ ವಾಸಿಸುವ ಸಿದ್ದಿ ಸಮುದಾಯದವರಿಗೆ ಸಿವಿಲ್ ಸೇವೆಯಲ್ಲಿ ಪ್ರಾತಿನಿಧ್ಯ ನೀಡುವುದಾಗಿ ಸಿದ್ದರಾಮಯ್ಯ ಅವರು ಘೋಷಿಸಿದ್ದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಖುರ್ಚಿಯಿಂದ ಕೆಳಗಿಳಿದ ಬಳಿಕ ಅವರ ಘೋಷಣೆ ಸಹ ಸುಳ್ಳಾಗಿದೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ನೇಮಕಾತಿಗೆ ಪ್ರಕಟಣೆ ಹೊರಡಿಸಿದ್ದು, ಸಿದ್ದರಾಮಯ್ಯ ಅವರು ಬಜೇಟಿನಲ್ಲಿ ಘೋಷಿಸಿದ ಅಂಶಗಳನ್ನು ಈ ನೇಮಕಾತಿಯಲ್ಲಿ ಪರಿಗಣಿಸಿಲ್ಲ.
ಅರಣ್ಯ ಅಂಚಿನ ಹಾಡಿಗಳಲ್ಲಿ ವಾಸ ಮಾಡುವ 13 ಬುಡಕಟ್ಟು ಜನಾಂಗದವರಿಗೆ ಸಿದ್ದರಾಮಯ್ಯ ಅವರು ವಿಶೇಷ ಒತ್ತು ನೀಡಿದ್ದರು. ಉದ್ಯೋಗ ನೇಮಕಾತಿ ಅವಧಿಯಲ್ಲಿ ಆ ಜನಾಂಗದವರಿಗೆ ಆದ್ಯತೆ ನೀಡುವುದಾಗಿ ಅವರು ಘೋಷಿಸಿದ್ದರು. ಜೇನು ಕುರುಬ, ಇರುಳಿಗ, ಕೊರಗ, ಸೋಲಿಗ, ಯರವ, ಪಣಿಯನ್, ಹಲಸರು, ಗೌಡಲು, ಬೆಟ್ಟ ಕುರುಬ, ಕಾಡು ಕುರುಬ, ಕುಡಿಯ, ಮಲೆಕುಡಿಯ ಜನಾಂಗದವರ ಜೊತೆ ಸಿದ್ದಿ ಸಮುದಾಯದವರ ಹೆಸರನ್ನು ಅವರು ದಾಖಲೀಕರಣ ಮಾಡಿಸಿದ್ದರು. 2025-26ನೇ ಆಯವ್ಯಯದಲ್ಲಿ ಸಿದ್ದಿ ಸಮುದಾಯದವರ ಹೆಸರು ಉಲ್ಲೇಖಿಸಿದ್ದರು. ಈ ಎಲ್ಲಾ ಜನಾಂಗದವರಿಗೆ ಪ್ರಾತಿನಿತ್ಯ ನೀಡುವುದಕ್ಕಾಗಿ ರಾಜ್ಯ ಸಿವಿಲ್ ಸೇವೆಗಳಲ್ಲಿ ವಿಶೇಷ ನೇರ ನೇಮಕಾತಿ ಮಾಡಿಕೊಳ್ಳುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದರು. ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸಿಸುವ ಸಿದ್ದಿ ಸಮುದಾಯದ ಅನೇಕ ಉದ್ಯೋಗ ಆಕಾಂಕ್ಷಿಗಳಿಗೆ ಖುಷಿ ತಂದಿತ್ತು.
2026-27ನೇ ಸಾಲಿನಲ್ಲಿ ಅರಣ್ಯ ಇಲಾಖೆ ಅರಣ್ಯ ವೀಕ್ಷಕ ಗ್ರೂಪ್ ಡಿ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಆಸಕ್ತಿವಹಿಸಿದ್ದು, 54 ಹುದ್ದೆಗಳಿಗೆ ಅರ್ಜಿ ಕರೆದಿದೆ. ಆದರೆ, ಅರಣ್ಯ ಇಲಾಖೆ ಹೊರಡಿಸಿದ ಈ ಅಧಿಸೂಚನೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಹೊರಡಿಸಿದ್ದ ವಿಷಯವೇ ಪ್ರಸ್ತಾಪವಾಗಿಲ್ಲ. ಮಹಿಳೆ, ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯತಿ ನೀಡಲಾಗಿದೆ. ಜೊತೆಗೆ ಪರಿಶಿಷ್ಟ/ಪಂಗಡ ಹಾಗೂ ಪ್ರವರ್ಗ ||ಎ, ||ಬಿ ಮತ್ತು |||ಎ & ಬಿ ಸೇರಿದವರಿಗೆ ಶುಲ್ಕ ವಿನಾಯತಿ ಕೊಡಲಾಗಿದೆ. ಜೊತೆಗೆ ಮಾಜಿ ಸೈನಿಕ, ಅಂಗವಿಕಲ, ಗ್ರಾಮೀಣ ಅಭ್ಯರ್ಥಿ, ಕನ್ನಡ ಮಾಧ್ಯಮ ವ್ಯಾಸಂಗ ಮಾಡಿದವರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಕುದುರೆಮುಖ ವನ್ಯಜೀವಿ ವಿಭಾಗದ 15 ಅರಣ್ಯ ವೀಕ್ಷಕ ಹುದ್ದೆಗಳ ಪೈಕಿ 8 ಸ್ಥಳೀಯ ಬುಡಕಟ್ಟು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಲಾಗಿದೆ. ಆದರೆ, ಸಿದ್ದರಾಮಯ್ಯ ಅವರು ಘೋಷಿಸಿದ ಸಿದ್ದಿ ಸಮುದಾಯದವರ ನೇರ ನೇಮಕಾತಿಯ ಬಗ್ಗೆ ಈ ಅಧಿಸೂಚನೆಯಲ್ಲಿ ಯಾವ ವಿಷಯವೂ ಇಲ್ಲ.