ಗೋಕರ್ಣದ ಸೇಫ್‌ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಶಾಖೆಯಲ್ಲಿ 80ನೇ ಸ್ವಾತಂತ್ರ‍್ಯೋತ್ಸವವನ್ನು ಶಿಸ್ತುಬದ್ಧವಾಗಿ ಆಚರಿಸಲಾಗಿದ್ದು, ಈ ವೇಳೆ ಸೊಸೈಟಿಯ ಸೇವೆಗಳ ಬಗ್ಗೆ ಅರಿವು ಮೂಡಿಸಲಾಯಿತು.
`ಹೊನ್ನಾವರ ಪ್ರಧಾನ ಕಚೇರಿ ಹೊಂದಿರುವ ಸಂಸ್ಥೆ ರಾಜ್ಯಾದ್ಯಂತ 20 ಶಾಖೆಗಳನ್ನು ಹೊಂದಿದೆ. ಈ ಸೊಸೈಟಿ ಸಹಕಾರದ ಜತೆಗೆ ಸಾಮಾಜಿಕ ಸೇವೆಯಲ್ಲೂ ಮುಂಚೂಣಿಯಲ್ಲಿದೆ. ಸಂಸ್ಥೆಯ ಅಧ್ಯಕ್ಷ ಜಿ ಜಿ ಶಂಕರ ಅವರು 75ನೇ ಸ್ವಾತಂತ್ರ‍್ಯೋತ್ಸವ ಸಂದರ್ಭದಲ್ಲಿ ಹರ್ ಘರ್ ತಿರಂಗ ಅಭಿಯಾನಕ್ಕೆ ಸ್ಪಂದಿಸಿ ಜಿಲ್ಲೆಯ 2000 ಮನೆಗಳಿಗೆ ರಾಷ್ಟ್ರಧ್ವಜ ಹಾಗೂ ಸಿಹಿತಿಂಡಿ ವಿತರಿಸಿದ್ದರು’ ಎಂದು ಶಾಖಾ ಪ್ರಭಾರ ವ್ಯವಸ್ಥಾಪಕ ವಿಶಾಂತ ದೇಶಭಂಡಾರಿ ಅವರು ವಿವರಿಸಿದರು.
`ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸೊಸೈಟಿಯೂ ಕೇಂದ್ರ ಸರ್ಕಾರಕ್ಕೆ 1.50 ಲಕ್ಷ ರೂ ಹಾಗೂ ರಾಜ್ಯ ಸರ್ಕಾರಕ್ಕೆ 1 ಲಕ್ಷ ಧನಸಹಾಯ ಮಾಡಿದೆ. 20 ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ತಿಂಗಳ ವೇತನದ ನೆರವು ಮತ್ತು ಜಿಲ್ಲೆಯಾದ್ಯಂತ ಸಾವಿರಾರು ಜನರಿಗೆ ಉಪಹಾರ, ಊಟದ ವ್ಯವಸ್ಥೆ ಮಾಡಲಾಗಿತ್ತು’ ಎಂದವರು ಈ ವೇಳೆ ಮಾಹಿತಿ ನೀಡಿದರು. `ಸಹಕಾರಿಯಲ್ಲಿ ಲಾಭ ಮಾತ್ರವಲ್ಲ, ಸೇವೆಯೂ ಗುರಿ ಎಂಬ ಆಶಯ ನಮ್ಮದು’ ಎಂದು ವಿವರಿಸಿದರು. ಸೊಸೈಟಿ ಸಿಬ್ಬಂದಿ ಕಾರ್ಯಕ್ರಮದಲ್ಲಿದ್ದರು.