ಸೋಮವಾರ ಬಿಡುಗಡೆಯಾದ ಸಚಿವರ ಪಟ್ಟಿಯಲ್ಲಿ ಭಟ್ಕಳ-ಹೊನ್ನಾವರ ಶಾಸಕ ಮಂಕಾಳು ವೈದ್ಯ ಅವರ ಹೆಸರಿದ್ದು, ಆ ನಂತರ ಹೊರಬಿದ್ದ ಮತ್ತೊಂದು ಪಟ್ಟಿಯಲ್ಲಿ ಮಂಕಾಳು ವೈದ್ಯ ಅವರ ಹೆಸರು ಮಾಯವಾಗಿದೆ. `ಟೈಪಿಂಗ್ ಮಿಸ್ಟೇಕ್ ಕಾರಣ ಮೊದಲ ಪಟ್ಟಿಯಲ್ಲಿ ಮಂಕಾಳು ವೈದ್ಯ ಅವರ ಹೆಸರು ಸೇರ್ಪಡೆಯಾಗಿತ್ತು’ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ!
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಮಂಕಾಳು ವೈದ್ಯ ಅವರು ಉತ್ಸುಕರಾಗಿದ್ದರು. ಅವರ ನಿರೀಕ್ಷೆಯಂತೆ ಸಚಿವ ಸ್ಥಾನದ ಪಟ್ಟಿಯಲ್ಲಿಯೂ ಹೆಸರು ಬಂದಿತ್ತು. ಆದರೆ, ಕೊನೆಕ್ಷಣದಲ್ಲಿ ಮಂಕಾಳು ವೈದ್ಯ ಅವರ ಹೆಸರು ಕೈ ಬಿಟ್ಟು ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡಿತು. ಆರಂಭದಲ್ಲಿ ಎಐಸಿಸಿ ಬಿಡುಗಡೆ ಮಾಡಿದ 20 ಸಚಿವರ ಪಟ್ಟಿಯಲ್ಲಿ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಅವರ ಹೆಸರಿದ್ದು, ಒಂದು ತಾಸಿನ ನಂತರ ಬಂದ ಮತ್ತೊಂದು ಪಟ್ಟಿಯಲ್ಲಿ ಅವರ ಹೆಸರು ಮಾಯವಾಗಲು ಕಾರಣವೇನು? ಎನ್ನುವುದರ ಬಗ್ಗೆ ಚರ್ಚೆ ನಡೆಯಿತು.
ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹೈಕಮಾಂಡ್ `ಇದು ಟೈಪಿಂಗ್ ಮಿಸ್ಟೇಕಿನಿಂದ ಆದ ಪ್ರಮಾದ’ ಎಂದು ಹೇಳಿದೆ. `ಆರಂಭದಲ್ಲಿ ಪಟ್ಟಿಯಲ್ಲಿ ಮಂಕಾಳ ವೈದ್ಯರ ಹೆಸರು ಇರಲಿಲ್ಲ. ನಂತರ ಪಟ್ಟಿಯಲ್ಲಿಯೂ ಇಲ್ಲ’ ಎಂದು ಸ್ಪಷ್ಠೀಕರಣ ಕೊಟ್ಟಿದೆ. ಸಚಿವ ಸ್ಥಾನ ಕೊಡುವುದಿಲ್ಲ ಎಂದಾದರೆ ಅವರನ್ನು ಕರೆಯಿಸಿಕೊಂಡಿದ್ದು ಏತಕೆ? ಸಿಕ್ಕ ಸಚಿವ ಸ್ಥಾನಕ್ಕೆ ಕಡ್ಡಿ ಮಾಡಿದ್ದು ಯಾರು? ಎನ್ನುವುದರ ಬಗ್ಗೆ ಈಗಲೂ ಗೊಂದಲವಿದೆ. ಈ ಎಲ್ಲದರ ನಡುವೆ ಮಂಕಾಳು ವೈದ್ಯ ಅವರ ಪರ ಅನುಕಂಪದ ಅಲೆ ಜೋರಾಗಿದ್ದು, ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರನ್ನು ಭೇಟಿ ಮಾಡಲಿದ್ದಾರೆ.