ಬೋಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ ಮಹಿಳೆಯೊಬ್ಬರಿಗೆ ಜೀವ ಬೆದರಿಕೆ ಬಂದಿದೆ.
ಮಾವಿನಕುರ್ವಾ ಮಠದಕೇರಿ ನಿವಾಸಿ ಚಂದ್ರಕಲಾ ತಿಮ್ಮಪ್ಪ ಗೌಡ ಅವರು ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಲ್ವರು ಸೇರಿ ‘ಮತ್ತೆ ದೂರು ನೀಡಿದರೆ ಕೊಂದು ಶರಾವತಿ ನದಿಗೆ ಎಸೆದು ನಾಪತ್ತೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿರುವ ಬಗ್ಗೆ ಅವರು ದೂರಿದ್ದಾರೆ.
ಹನುಮಂತ ಕೆರಿಯಾ ಗೌಡ, ಚಂದ್ರಹಾಸ ಧರ್ಮಾ ಗೌಡ, ಗಣೇಶ ಕೇಶ ಗೌಡ ಹಾಗೂ ಮೋಹನ ತಿಮ್ಮಪ್ಪ ಗೌಡ ಎಂಬಾತರು ಚಂದ್ರಕಲಾ ಗೌಡ ಅವರಿಗೆ ಬೆದರಿಸಿದ್ದಾರೆ. ಆರೋಪಿತರು ಈ ಹಿಂದೆ ಹೊನ್ನಾವರ ತಾರಿಬಾಗಿಲು ಬಳಿ ಶರಾವತಿ ನದಿಯಲ್ಲಿ ಬೋಟಿಂಗ್ ನಡೆಸುತ್ತಿದ್ದರು. ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೋಟಿಂಗ್ಗೆ ನಿಷೇಧ ಹೇರಿದ ಬಳಿಕವೂ ಮಾವಿನಕುರ್ವಾ ಮಠದಕೇರಿ ಭಾಗದಿಂದ ಶರಾವತಿ ನದಿಯಲ್ಲಿ ಬೋಟಿಂಗ್ ನಡೆಸುತ್ತಿದ್ದರು.
ಈ ವಿಚಾರವನ್ನು ಯಾರೋ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ಆದರೆ, ಮಾಹಿತಿ ನೀಡುತ್ತಿರುವವರು ಚಂದ್ರಕಲಾ ಅವರೇ ಎಂದು ಆರೋಪಿತರು ಭಾವಿಸಿದ್ದರು. ಚಂದ್ರಕಲಾ ಅವರು ಹೊನ್ನಾವರ ಪೊಲೀಸ್ ಠಾಣೆ ಹಾಗೂ ತಹಶೀಲ್ದಾರ್ಗೆ ಬೋಟಿಂಗ್ ಕುರಿತು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಆ16ರಂದು ಅವರ ಮನೆಯ ಬಳಿ ಬಂದು ಜಗಳ ಮಾಡಿದ್ದರು.
ಈ ಕುರಿತು ಚಂದ್ರಕಲಾ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಸಿಟ್ಟಾದ ಆರೋಪಿತರು ಎರಡು ದಿನಗಳ ಬಳಿಕ ಮತ್ತೆ ಎದುರಾಗಿದ್ದಾರೆ.
ದಾರಿ ಮಧ್ಯೆಯೇ ಅಡ್ಡಗಟ್ಟಿ ಬೆದರಿಕೆ
ಆ 18ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಚಂದ್ರಕಲಾ ಅವರು ಮನೆಯ ಹಿಂಬದಿಯ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ನಾಲ್ವರು ಅಲ್ಲಿಗೆ ಬಂದು ಅವರನ್ನು ಅಡ್ಡಗಟ್ಟಿ ತಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅವಾಚ್ಯವಾಗಿ ನಿಂದಿಸಿದ ಆರೋಪಿತರು, ‘ಇನ್ನೊಮ್ಮೆ ನಮ್ಮ ವಿರುದ್ಧ ದೂರು ನೀಡಿದರೆ ಕೊಂದು ಶರಾವತಿ ನದಿಗೆ ಎಸೆದು ನಾಪತ್ತೆ ಮಾಡುತ್ತೇವೆ’ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಕಲಾ ತಿಳಿಸಿದ್ದಾರೆ.
ಘಟನೆಯ ಬಳಿಕ ಚಂದ್ರಕಲಾ ಅವರು ಹೊನ್ನಾವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಸಂಬಂಧ ವಿರುದ್ಧ ಪ್ರಕರಣ ದಾಖಲಾಗಿದೆ.