ಶರಾವತಿ ಪಂಪ್ ಸ್ಟೋರೆಜ್ ವಿರುದ್ಧ ಹೋರಾಡುತ್ತಿರುವ ಬಂಗಾರಮಕ್ಕಿಯ ಮಾರುತಿ ಗುರೂಜಿ ಪೊಲೀಸರ ನಡೆಯ ಬಗ್ಗೆ ಕಿಡಿಕಾರಿದ್ದಾರೆ. `ತಾವು ದೂರು ನೀಡಿದರೂ ಪೊಲೀಸರು ಅದನ್ನು ಸ್ವೀಕರಿಸಿಲ್ಲ’ ಎಂದವರು ಆರೋಪಿಸಿದ್ದಾರೆ.
ಮೊಬೈಲ್ ಮಿಡಿಯಾ ನೆಟ್‌ವರ್ಕ ಜೊತೆ ಮಾತನಾಡಿದ ಅವರು `ಶರಾವತಿ ಪಂಪ್ ಸ್ಟೋರೆಜ್ ವಿಷಯವಾಗಿ ಹೋರಾಟ ಶುರು ಮಾಡಿದಾಗ 16 ಅಧಿಕಾರಿಗಳು ನಮ್ಮಲ್ಲಿ ಬಂದಿದ್ದರು. ನಿಮ್ಮ ಶಾಲೆಗೆ ಏನು ಬೇಕು? ದೇವಸ್ಥಾನಕ್ಕೆ ಏನು ಬೇಕು? ಎಂದು ಪ್ರಶ್ನಿಸಿದರು. ನಂತರ ವಿಷ್ಣು ದೇವಸ್ಥಾನ ಸ್ಥಳಾಂತರ ಮಾಡಿ, ಮತ್ತೇನು ಪರಿಹಾರ ಕೊಡಬೇಕು?’ ಎಂದು ಕೇಳಿದ್ದರು. ಅದಕ್ಕೆ ಒಪ್ಪದೇ ಇದ್ದಾಗ 1 ಎಕರೆ ಜಾಗ ಕೊಡುವುದಾಗಿ ಆಮೀಷ ಒಡ್ಡಿದ್ದರು. ಅದಕ್ಕೂ ಬಗ್ಗದೇ ಇದ್ದಾಗ ನಮ್ಮ ಪಕ್ಕದ ಭೂಮಿ ಮಾಲಕರಿಗೆ ಎಕರೆಗೆ ಎರಡು ಕೋಟಿ ರೂ ನೀಡುವುದಾಗಿ ಹೇಳಿದ್ದಾರೆ. ಅವರು ಏನೇ ಮಾಡಿದರೂ ನಾವು ಪಂಪ್ ಸ್ಟೋರೆಜ್ ಮಾಡಲು ಅವಕಾಶ ಕೊಡುವುದಿಲ್ಲ’ ಎಂದರು.
`ಅದಾದ ನಂತರ ನಮಗೆ ಫೋನ್ ಮೂಲಕ ಬೆದರಿಕೆ ಬಂದಿತು. ಆರಂಭದಲ್ಲಿ ಅದನ್ನು ನಾನು ನಿರ್ಲಕ್ಷಿಸಿದ್ದು, ಅದರ ಆಳ ಅರಿವಾದ ನಂತರ ಸಂಬoಧಿಸಿದ ಇಲಾಖೆ ಗಮನಕ್ಕೆ ತಂದಿದ್ದೇನೆ. ಅಲ್ಲಿಯೂ ಸುಮ್ಮನಿರದ ಕಾಣದ ಕೈಗಳು ಶಿವಮೊಗ್ಗದಲ್ಲಿ ನಮ್ಮ ಮೇಲೆ ದಾಳಿಗೆ ಮುಂದಾದವು. ಆ ವೇಳೆ ಪೊಲೀಸರಿಗೆ ದೂರು ನೀಡಿದರೂ ಅದನ್ನು ತೆಗೆದುಕೊಳ್ಳಲಿಲ್ಲ. ನನ್ನ ವಿರುದ್ಧವೇ ದೂರು ದಾಖಲಿಸಿದರು’ ಎಂದು ಮಾರುತಿ ಗುರೂಜಿ ಹೇಳಿದ್ದಾರೆ.
`ನಾವು ಚಲಿಸುತ್ತಿದ್ದ ಕಾರಿಗೆ ಬೈಕಿನಲ್ಲಿದ್ದವರು ಗುದ್ದಿದ್ದು, ಆ ಬಗ್ಗೆ ದೂರು ನೀಡಲು ಹೋದಾಗ ಇದೊಂದು ಹೈ ಪ್ರೊಪೈಲ್ ಸಮಸ್ಯೆ ಎಂದು ದೂರು ಸ್ವೀಕರಿಸುವ ಅಧಿಕಾರಿ ರಜೆ ಹಾಕಿದರು. ಐದು ದಿನ ಕಳೆದರೂ ದೂರು ಸ್ವೀಕರಿಸಬೇಕಿದ್ದ ಪೊಲೀಸರೇ ಬರಲಿಲ್ಲ. ಅದಾದ ನಂತರ ನಮ್ಮ ವಿರುದ್ಧ ದೂರು ಸ್ವೀಕರಿಸಿ, ಸಮಸ್ಯೆ ಮಾಡಲಾಯಿತು’ ಎಂದವರು ವಿವರಿಸಿದರು. `ಈ ಯಾವ ತಂತ್ರಗಳಿಗೂ ನಾವು ಬಗ್ಗುವುದಿಲ್ಲ. ಒಳ್ಳೆ ಕಾರ್ಯಕ್ಕೆ ಜೀವ ಹೋದರೆ ಅದೇ ನನಗೆ ಸಂತೋಷ’ ಎಂದವರು ಹೇಳಿದರು.