ಭಾನುವಾರ ಸುರಿದ ಭಾರೀ ಮಳೆಗೆ ಜೊಯಿಡಾ-ಕಾರವಾರ ರಸ್ತೆ ದೇವುಳ್ಳಿ ಬಳಿ ಕುಸಿತಕ್ಕೆ ಒಳಗಾಗಿದೆ. ಆ ಕುಸಿತ ಪ್ರದೇಶದಲ್ಲಿ ಕೆಸರು ತುಂಬಿದ್ದು, KSRTC ಬಸ್ಸು ಅಲ್ಲಿ ಸಿಲುಕಿ ಬಿದ್ದಿದೆ.
ಭಾನುವಾರ ಸಂಜೆ ಪ್ರಯಾಣಿಕರನ್ನು ಹೊತ್ತ ಸರ್ಕಾರಿ ಬಸ್ಸು ಜೊಯಿಡಾ-ಕಾರವಾರ ಮಾರ್ಗವಾಗಿ ಸಂಚರಿಸಿದ್ದು, ಆ ಬಸ್ಸಿನಲ್ಲಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಸಮಯಕ್ಕೆ ಸರಿಯಾಗಿ ತಲುಪಬೇಕಾದ ಸ್ಥಳಕ್ಕೆ ತಲುಪಲಾಗದೇ ಸಮಸ್ಯೆಗೆ ಸಿಲುಕಿದರು. ಬಸ್ಸು ಸಿಕ್ಕಿ ಬಿದ್ದಿದ್ದರಿಂದ ಅನೇಕರು ಆತಂಕಕ್ಕೆ ಒಳಗಾದರು. ರಸ್ತೆ ಕುಸಿತದಿಂದಾಗಿ ಬಸ್ಸಿನ ಒಂದು ಚಕ್ರ ಆಳಕ್ಕೆ ಹೋಗಿದ್ದು, ಅದರಿಂದ ಇನ್ನಿತರ ವಾಹನಗಳ ಸಂಚಾರಕ್ಕೂ ಸಮಸ್ಯೆಯಾಯಿತು. ಬಸ್ಸು ಸಿಕ್ಕಿಬಿದ್ದ ಪರಿಣಾಮ ಬಸ್ಸಿನ ಒಳಗಿದ್ದ ಪ್ರಯಾಣಿಕರಲ್ಲಿಯೂ ಗೊಂದಲವಾಗಿ, ಬಸ್ಸಿನ ಒಳಗೆ ನೂಕು ನುಗ್ಗಲು ಉಂಟಾಯಿತು. ನಂತರ ಬಸ್ ಚಾಲಕ-ನಿರ್ವಾಹಕರು ಸಮಸ್ಯೆ ವಿವರಿಸಿ ಎಲ್ಲರನ್ನು ಸಮಾಧಾನ ಮಾಡಿದರು.
ಘಟನೆಯ ಮಾಹಿತಿ ತಿಳಿದ ಜೋಯಿಡಾ ಪೊಲೀಸ್ ಠಾಣೆಯ ಪಿಎಸ್‌ಐ ಜಗದೀಶ್ ಅವರು ಸಿಬ್ಬಂದಿಯೊAದಿಗೆ ಸ್ಥಳಕ್ಕೆ ಧಾವಿಸಿದರು. ಪರಿಸ್ಥಿತಿ ಅವಲೋಕಿಸಿ ಪರಿಹಾರ ಕ್ರಮ ಜರುಗಿಸಿದರು. ಈಚೆಗೆ ಈ ಮಾರ್ಗದ ರಸ್ತೆ ಹದಗೆಟ್ಟಿದ್ದು, ರಸ್ತೆ ಕುಸಿತ ಸಾಮಾನ್ಯವಾಗಿದೆ. ಇಂಥ ಘಟನೆ ಪ್ರಯಾಣಿಕರ ಜೀವಕ್ಕೂ ಅಪಾಯವಾಗಿದ್ದು, ತ್ವರಿತ ಕ್ರಮ ಜರುಗಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.