ಕಾರವಾರ ಕಿನ್ನರದ ಪ್ರಶಾಂತ ಗೋವೇಕರ್ ಅವರ ಗಡಿಪಾರು ಆದೇಶಕ್ಕೆ ಹೈಕೋರ್ಟ ತಡೆ ನೀಡಿದೆ. ಹೀಗಾಗಿ ಅವರು ಮತ್ತೆ ಕಾರವಾರಕ್ಕೆ ಬರುತ್ತಿದ್ದಾರೆ.
ಕಾರವಾರ ತಾಲೂಕು ಪಂಚಾಯತ ಮಾಜಿ ಸದಸ್ಯರಾಗಿದ್ದ ಪ್ರಶಾಂತ ಗೋವೇಕರ ಅವರ ವಿರುದ್ಧ ಒಟ್ಟು 12 ಪೊಲೀಸ್ ಕೇಸುಗಳಿದ್ದವು. ಕೌಟುಂಬಿಕ ಕಲಹ, ದ್ವೇಷ ರಾಜಕಾರಣ, ಊರಿನಲ್ಲಿರುವ ಕೆಲವರ ವಿರುದ್ಧ ಅನಗತ್ಯ ಆರೋಪಗಳ ವಿರುದ್ಧ ಪ್ರಕರಣಗಳಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಕಾರಣ ನೀಡಿ ಪೊಲೀಸರು ಪ್ರಶಾಂತ ಗೋವೆಕರ್ ಅವರ ವಿರುದ್ಧ ರೌಡಿಶೀಟರ್ ಹಾಳೆ ತೆರೆದಿದ್ದರು. ಅದಾಗಿಯೂ, ಪ್ರಶಾಂತ ಗೋವೇಕರ್ ಅವರ ವರ್ತನೆಯಲ್ಲಿ ಬದಲಾವಣೆ ಆಗದ ಕಾರಣ ನೀಡಿ ಅವರನ್ನು ಗಡಿಪಾರು ಮಾಡಿದ್ದರು.
ಗಡಿಪಾರು ಹಿನ್ನಲೆ ಪ್ರಶಾಂತ ಗೋವೇಕರ್ ಅವರನ್ನು ಪೊಲೀಸರು ಹೊಸಪೇಟೆಗೆ ಬಿಟ್ಟು ಬಂದಿದ್ದರು. ಇದರ ವಿರುದ್ಧ ಪ್ರಶಾಂತ ಗೋವೇಕರ್ ಅವರು ಹೈಕೋರ್ಟ ಮೊರೆಹೋದರು. ಧಾರವಾಡ ಹೈಕೋರ್ಟಿನಲ್ಲಿ ದಾವೆ ಹೂಡಿದ ಬೆಳಗಾವಿಯ ವಕೀಲ ರಾಮಾ ಘೋರ್ಪಡೆ ಅವರು ಪ್ರಶಾಂತ ಗೋವೇಕರ ಅವರ ಪರ ವಾದ ಮಾಡಿದರು. ‘ಪ್ರಶಾಂತ ಗೋವೇಕರ ಅವರ ವಿರುದ್ಧ 12ಕೇಸುಗಳಿದ್ದರೂ ಅದರಲ್ಲಿ ಎಂಟು ಕೇಸು ನಿಕಾಲಿಯಾಗಿದೆ. ನಾಲ್ಕು ಕೇಸು ವಿಚಾರಣಾ ಹಂತದಲ್ಲಿದೆ. ಹೀಗಾಗಿ ಅವರ ಗಡಿಪಾರು ಆದೇಶ ಸರಿಯಲ್ಲ’ ಎಂದು ವಾದಿಸಿದರು.
ಈ ವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆವರೆಗೆ ಗಡಿಪಾರು ಆದೇಶಕ್ಕೆ ತಡೆ ನೀಡಿದೆ. ಹೀಗಾಗಿ ಪ್ರಶಾಂತ ಗೋವೇಕರ್ ಅವರು ಊರಿಗೆ ಮರಳುತ್ತಿದ್ದಾರೆ. ಈ ಬಗ್ಗೆ ಪ್ರಶಾಂತ ಗೋವೇಕರ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.