ಬೈತಕೋಲದ ಸುರೇಶ ಕೋಳಿ ಹಾಗೂ ತಾರಾ ಕೋಳಿ ಒಟ್ಟಿಗೆ ಅಕ್ರಮ ಸರಾಯಿ ಮಾರಾಟ ದಂಧೆ ನಡೆಸುತ್ತಿದ್ದು, ಪೊಲೀಸರು ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಪತ್ನಿಯನ್ನು ಅಲ್ಲಿಯೇ ಬಿಟ್ಟು ಸುರೇಶ ಕೋಳಿ ಅವರು ಪರಾರಿಯಾಗಿದ್ದಾರೆ.
ಕಾರವಾರದ ಬೈತಕೋಲದ ಬಂದರು ರಸ್ತೆಯಲ್ಲಿ ಸುರೇಶ ಕೋಳಿ ಅವರು ವಾಸವಾಗಿದ್ದಾರೆ. ಮೀನುಗಾರಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡ ಅವರಿಗೆ ಅಲ್ಲಿನ ಆದಾಯ ಸಾಲುತ್ತಿಲ್ಲ. ಹೀಗಾಗಿ ಅವರು ಅಡ್ಡದಾರಿ ಹಿಡಿದಿದ್ದು, ಆ ದಾರಿಯಲ್ಲಿ ತಮ್ಮ ಕುಟುಂಬವನ್ನು ಸಿಲುಕಿಸಿದ್ದಾರೆ. ಸುರೇಶ ಕೋಳಿ ಅವರು ಆಗಾಗ ಗೋವಾಗೆ ಹೋಗಿ ಬರುತ್ತಾರೆ. ಗೋವಾದಿಂದ ಮರಳುವಾಗಲ ಅಲ್ಲಿ ಕಡಿಮೆ ಬೆಲೆಗೆ ಸಿಗುವ ಬಗೆ ಬಗೆಯ ಮದ್ಯದ ಬಾಟಲಿಗಳನ್ನು ತರುತ್ತಾರೆ. ಚೆಕ್‌ಪೋಸ್ಟ್ ಸೇರಿ ಎಲ್ಲಾ ಕಡೆಯೂ ಪೊಲೀಸರ ಕಣ್ತಪ್ಪಿಸಿ ಆ ಬಾಟಲಿಗಳನ್ನು ಮನೆಯೊಳಗೆ ಸಂಗ್ರಹಿಸುತ್ತಾರೆ. ನಂತರ ಮನೆಯ ಮುಂದಿನ ಆವರಣವನ್ನೇ ಮಿನಿ ಬಾರ್ ಆಗಿ ಪರಿವರ್ತಿಸಿ, ಆ ಸರಾಯಿ ಮಾರಾಟ ಮಾಡುತ್ತಾರೆ.
ಗೋವಾ ಸರಾಯಿ ಮಾರಾಟದಿಂದಾಗಿ ಕರ್ನಾಟಕ ಸರ್ಕಾರಕ್ಕೆ ಆರ್ಥಿಕ ನಷ್ಟವಾಗುತ್ತಿದೆ. ಹೀಗಾಗಿ, ಗೋವಾ ಸರಾಯಿ ಮಾರಾಟಕ್ಕೆ ಇಲ್ಲಿ ಅವಕಾಶವಿಲ್ಲ. ಜೊತೆಗೆ ಸುರೇಶ ಕೋಳಿ ಅವರು ಮದ್ಯ ಮಾರಾಟದ ಪರವಾನಿಗೆಯನ್ನು ಸಹ ಪಡೆದಿಲ್ಲ. ಈ ಎಲ್ಲಾ ಹಿನ್ನಲೆ ಖಚಿತ ಮಾಹಿತಿ ಆಧರಿಸಿ ಕಾರವಾರ ಶಹರ ಪೊಲೀಸ್ ಠಾಣೆ ಪಿಸೈ ಉದ್ದಪ್ಪ ಧರಪ್ಪನವರ್ ಅವರು ಸುರೇಶ ಕೋಳಿ ಅವರ ಮನೆಯಂಗಳಕ್ಕೆ ದಾಳಿಯಿಟ್ಟಿದ್ದಾರೆ. ಪೊಲೀಸರನ್ನು ಕಂಡ ಸುರೇಶ ಕೋಳಿ ಅವರು ಅಲ್ಲಿಂದ ಪರಾರಿಯಾಗಿದ್ದು, ಮನೆಯಲ್ಲಿದ್ದ ಮದ್ಯ ಮಾರಾಟಗಾರ್ತಿ ತಾರಾ ಕೋಳಿ ಅವರು ಸಿಕ್ಕಿ ಬಿದ್ದಿದ್ದಾರೆ.
ಒಟ್ಟು ಐದು ಬಗೆಯ ಮದ್ಯದ ಬಾಟಲಿಯನ್ನು ಪೊಲೀಸರು ಜಪ್ತು ಮಾಡಿದ್ದಾರೆ. 3735ರೂಪಾಯಿಯ 32 ಬಾಟಲಿಗಳನ್ನು ವಶಕ್ಕೆಪಡೆದು, ಆ ದಂಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.