ಸಣ್ಣಪುಟ್ಟ ವಿಷಯಗಳನ್ನು ದೊಡ್ಡ ಗಲಾಟೆ ಮಾಡಿಕೊಳ್ಳುತ್ತಿದ್ದ ಕಿನ್ನರದ ಪ್ರಶಾಂತ ಗೋವೇಕರ್ ಅವರನ್ನು ಪೊಲೀಸರು ಊರು ಬಿಟ್ಟು ಓಡಿಸಿದ್ದಾರೆ. ಪ್ರಶಾಂತ ಗೋವೇಕರ್ ಅವರ ವಿರುದ್ಧ 12 ಪೊಲೀಸ್ ಪ್ರಕರಣಗಳಿದ್ದು, ಗಡಿಪಾರು ಆದೇಶ ಬರುವಲ್ಲಿ ಅವರ ಪತ್ನಿ ನೀಡಿದ ದೂರು ಸಹ ಪ್ರಮುಖ ಪಾತ್ರವಹಿಸಿದೆ!
ಪ್ರಶಾಂತ ಗೋವೇಕರ್ ಅವರು ತಾಲೂಕು ಪಂಚಾಯತ ಸದಸ್ಯರಾಗಿ ಕೆಲಸ ಮಾಡಿದ್ದರು. ಉಪಾಧ್ಯಕ್ಷರಾಗಿಯೂ ಅವರು ಅಧಿಕಾರ ಅನುಭವಿಸಿದ್ದರು. ಮಾಜಿ ಆದ ನಂತರ ಅವರು ಊರಿನಲ್ಲಿ ನಡೆಯುವ ಅಕ್ರಮಗಳ ವಿರುದ್ಧ ದೊಡ್ಡ ಧ್ವನಿ ಎತ್ತಿದ್ದರು. ಮುಖ್ಯವಾಗಿ ಮರಳುಗಾರಿಕೆ ವಿರುದ್ಧ ಪದೇ ಪದೇ ದೂರು ನೀಡುತ್ತಿದ್ದು, ಇದೇ ವಿಷಯವಾಗಿ ಹೊಡೆದಾಟವನ್ನು ಸಹ ನಡೆಸಿದ್ದರು. ಕೌಟುಂಬಿಕ ಕಲಹ, ದ್ವೇಷ ರಾಜಕಾರಣ, ಊರಿನಲ್ಲಿರುವ ಕೆಲವರ ವಿರುದ್ಧ ಅನಗತ್ಯ ಆರೋಪ ಅವರಿಗೆ ಮುಳುವಾಯಿತು. ಪ್ರಶಾಂತ ಗೋವೇಕರ್ ಅವರ ವಿರುದ್ಧ ಅವರ ಪತ್ನಿಯೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅತ್ತೆ ಸಹ ಅವರ ವಿರುದ್ಧ ದೂರಿದ್ದರು. ಅದು-ಇದು ಸೇರಿ ಒಟ್ಟು ವಿವಿಧ ಪೊಲೀಸ್ ಠಾಣೆಯಲ್ಲಿ 12 ಕೇಸುಗಳು ದಾಖಲಾಗಿದ್ದವು.
ಈ ಎಲ್ಲಾ ಹಿನ್ನಲೆ ಪ್ರಶಾಂತ ಗೋವೇಕರ್ ಅವರ ವಿರುದ್ಧ ಪೊಲೀಸರು ರೌಡಿ ಶೀಟರ್ ಹಾಳೆ ತೆರೆದಿದ್ದರು. ಅದಾಗಿಯೂ, ಪ್ರಶಾಂತ ಗೋವೇಕರ್ ಅವರ ವರ್ತನೆಯಲ್ಲಿ ಬದಲಾವಣೆ ಆಗಿರಲಿಲ್ಲ. ಹೀಗಾಗಿ ಗಡಿಪಾರಿಗೆ ಶಿಫಾರಸ್ಸು ಮಾಡಿದ್ದು, ಪೊಲೀಸ್ ಅಧೀಕ್ಷಕರು ಅದಕ್ಕೆ ಅಧಿಕೃತ ಮುದ್ರೆ ಒತ್ತಿದರು. ಸದ್ಯ ಪ್ರಶಾಂತ ಗೋವೇಕರ್ ಅವರನ್ನು ಪೊಲೀಸರು ಹೊಸಪೇಟೆಗೆ ಬಿಟ್ಟು ಬಂದಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಪ್ರಶಾಂತ ಗೋವೇಕರ್ ಅವರನ್ನು ಗಡಿಪಾರು ಮಾಡಿದ್ದಾರೆ.