ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದ ಹಲವು ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ತಾಸುಗಳ ಕಾಲ ಹೋರಾಟಗಾರರನ್ನು ಹಿಡಿದಿಟ್ಟು, ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ.
ಎಸ್ ಕೆ ಎಂ-ಜೆಸಿಟಿಯು ಕರೆಯ ಮೇರೆಗೆ ವಿವಿಧ ಸಂಘಟನೆಯವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾಕಾರರು ಘೋಷಣೆ ಕೂಗಿದ್ದು, ಅದಾದ ನಂತರ ಒಟ್ಟಾಗಿ ಕಚೇರಿ ಒಳಗೆ ನುಗ್ಗುವ ಪ್ರಯತ್ನ ಮಾಡಿದ್ದಾರೆ. ತಕ್ಷಣ ಅದನ್ನು ತಡೆದ ಪೊಲೀಸರು 40ಕ್ಕೂ ಅಧಿಕ ಜನರನ್ನು ಬಂಧಿಸಿ ಡಿ ಆರ್ ಕ್ವಾಟರ್ಸ್’ಗೆ ಸ್ಥಳಾಂತರಿಸಿದ್ದಾರೆ. ಅಲ್ಲಿ ಒಂದು ತಾಸುಗಳ ಕಾಲ ಬಂಧನದಲ್ಲಿರಿಸಿಕೊAಡು ನಂತರ ಬಿಡುಗಡೆ ಮಾಡಿದ್ದಾರೆ.
ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ, ಕಾರ್ಪೊರೇಟ್ ಭೂ ಕಬಳಿಕೆ, ಕಾರ್ಮಿಕ ವಿರೋಧಿ ಕನಿಷ್ಠ ಕೂಲಿ ಪರಿಷ್ಕರಣೆ, ವಿಬಿ ಗ್ರಾಮ್ ಜಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ 2025, ಬೀಜ ಕಾಯ್ದೆ, ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ಧೋರಣಾ ಚೌಕಟ್ಟು ಹಾಗೂ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಹೋರಾಟಗಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. `ಎಂ ಎಸ್ ಸ್ವಾಮಿನಾಥನ್ ಶಿಪಾರಸ್ಸಿನಂತೆ ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಶಾಸನ ಜಾರಿಗೊಳಿಸಬೇಕು. ಎಲ್ಲಾ ರೈತ-ಕೃಷಿಕೂಲಿಕಾರ-ಮಹಿಳೆಯರ ಎಲ್ಲಾ ರೀತಿಯ ಸಾಲ ಮನ್ನಾ ಮಾಡಬೇಕು. ಋಣ ಮುಕ್ತ ಕಾಯ್ದೆ ಜಾರಿಗೆ ಮತ್ತು ಶಾಸನಬದ್ದ ಜೀವನಾವಶ್ಯಕ ಕನಿಷ್ಟ ಕೂಲಿ ಶಾಸನ ತರಬೇಕು. ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ, ಎಲ್ಲಾ ವಲಯದಲ್ಲಿನ ಖಾಸಗೀಕರಣ ಹಾಗೂ ಕಾರ್ಪೋರೇಟ್ ಶೋಷಣೆ ಮೇಲೆ ಸೂಕ್ತ ನಿಯಂತ್ರಣ ಹಾಕದ ಕಾರಣ ಆಕ್ಷೇಪವ್ಯಕ್ತಪಡಿಸಿದ್ದಾರೆ. ಬ್ಯಾಂಕ್, ವಿಮೆ,ಆರೋಗ್ಯ, ಶಿಕ್ಷಣ ಖಾಸಗೀಕರಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಹೋರಾಟಗಾರರಾದ ಶಾಂತಾರಾಮ ನಾಯಕ, ತಿಲಕ್ ಗೌಡ, ಯಮುನಾ ಗಾಂವ್ಕರ, ಸುನಂದ, ಸಲಿಂ ಸೈಯದ್, ಶ್ಯಾಮನಾಥ ನಾಯ್ಕ, ಬೀಮಣ್ಣ ಬೋವಿ, ಲಕ್ಷ್ಮಿ ಸಿದ್ದಿ, ತಿಮ್ಮಪ್ಪ ಗೌಡ, ಮೋಹಿನಿ ನಮಸೇಕರ, ಗೀತಾ ನಾಯ್ಕ, ವಿದ್ಯಾ ವೈದ್ಯ, ವೀರೇಶ ರಾಠೋಡ, ಗೀರಾ ಗೌಡ, ಸಂತೋಷ ನಾಯ್ಕ ಅವರು ಈ ದಿನ ಬಂಧನಕ್ಕೆ ಒಳಗಾಗಿ, ನಂತರ ಬಿಡುಗಡೆಯಾಗಿದ್ದಾರೆ.