ಕಡಿಮೆ ಬೆಲೆಗೆ ಒಳ್ಳೆಯ ಸೋಲಾರ್ ಪ್ಯಾನಲ್ ಸಿಗುತ್ತದೆ ಎಂದು ನಂಬಿದ ಅಮದಳ್ಳಿಯ ಜಯಾ ಸೂರ್ಯವಂಶಿ ಅವರಿಗೆ ಮೋಸವಾಗಿದೆ. ಆ ಸೋಲಾರ್ ಮಾರಾಟ ಮಾಡಿ ವ್ಯಾಪಾರ ವೃದ್ಧಿಸಿಕೊಳ್ಳಲು ಪ್ರಯತ್ನಿಸಿದ ಅವರಿಗೆ 3.94 ಲಕ್ಷ ರೂ ನಷ್ಟವಾಗಿದೆ.
ಮಹಾರಾಷ್ಟ ಮೂಲದ ಜಯಾ ಸೂರ್ಯವಂಶಿ ಅವರು ಕಾರವಾರದ ಅಮದಳ್ಳಿಯಲ್ಲಿ ವಾಸವಾಗಿದ್ದಾರೆ. ಅವರ ಪತಿ ಸೋಲಾರ್ ಪ್ಯಾನಲ್ ಮಾರಾಟ ಮಾಡಿ ಬದುಕು ಕಂಡುಕೊoಡಿದ್ದಾರೆ. ಗೂಗಲ್ ಮೂಲಕ ಅವರು ಕಡಿಮೆ ಬೆಲೆಯಲ್ಲಿ ಸೋಲಾರ್ ಪ್ಯಾನಲ್ ಹುಡುಕಾಟ ನಡೆಸಿದ್ದು, ಆಗ ಅವರಿಗೆ ನಕಲಿ ಜಾಹೀರಾತು ಕಾಣಿಸಿದೆ. ಅದನ್ನು ನಂಬಿದ ಅವರು ಆ ಜಾಹೀರಾತುದಾರರನ್ನು ಸಂಪರ್ಕಿಸಿದ್ದಾರೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಸಿಗುವ ಸೋಲಾರ್ ಫ್ಯಾನಲ್ ಖರೀದಿಸಿ ಹೆಚ್ಚು ಲಾಭ ಮಾಡಬಹುದು ಎಂದು ಅವರು ಅಂದಾಜಿಸಿದ್ದಾರೆ.
ಸೋಲಾರ್ ಕಂಪನಿಯ ಸಂಸ್ಥೆಯ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಜಯಾ ಸೂರ್ಯವಂಶಿ ಅವರಿಗೆ 30 ಪ್ಯಾನಲ್ ಖರೀದಿಸಲು ಹೇಳಿದ್ದಾರೆ. ಹಾಗೇ ಮಾಡಿದರೆ, ಪ್ರತಿ ಪ್ಯಾನಲ್’ಗೆ 12528ರೂ ದರದಲ್ಲಿ ಕೊಡುವುದಾಗಿ ಹೇಳಿದ್ದಾರೆ. ಇದನ್ನು ನಂಬಿದ ಜಯಾ ಸೂರ್ಯವಂಶಿ ಅವರು 3,94,632ರೂ ಪಾವತಿಸಿದ್ದಾರೆ. ಅದಾದ ನಂತರ ಅವರಿಗೆ ಮೋಸ ಹೋಗಿರುವುದು ಗೊತ್ತಾಗಿದೆ.
ಪಾವತಿಸಿದ ಹಣವೂ ಅವರಿಗೆ ಮರಳಿ ಬಂದಿಲ್ಲ. ಸೋಲಾರ್ ಪ್ಯಾನಲ್ ಸಹ ಸಿಕ್ಕಿಲ್ಲ. ಸೋಲಾರ್ ಫ್ಯಾನಲ್ ಮಾರಾಟ ಮಾಡದ ವ್ಯಕ್ತಿ ಅವರಿಗೆ ನಂಬಿಸಿ ಹಣಪಡೆದಿದ್ದು, ಆ ಹಣ ಮರಳಿಪಡೆಯಲು ಅವರು ಕಾನೂನು ಹೋರಾಟ ನಡೆಸಿದ್ದಾರೆ.