ಯಲ್ಲಾಪುರದ ಮಾರ್ಕೋಸ್ ಅವರು ಅಪಘಾತದಲ್ಲಿ ಗಾಯಗೊಂಡು ಕಾರವಾರ ಆಸ್ಪತ್ರೆ ಸೇರಿದ್ದು, ಅವರಿಗೆ ಅಗತ್ಯವಿರುವ ರಕ್ತ ಕೊಡಿಸುವಲ್ಲಿ ವಾಟ್ಸಪ್ ಗ್ರೂಪ್ ನೆರವಾಗಿದೆ. ಕುಮಟಾ ಮೂಲದ ಪೊಲೀಸ್ ಸಿಬ್ಬಂದಿ ಅನಂತ ನಾಯ್ಕ ಅವರು ತಕ್ಷಣ ಆಗಮಿಸಿ ರಕ್ತದಾನ ಮಾಡಿದ್ದಾರೆ.
ಯಲ್ಲಾಪುರದ ಮಂಜುನಾಥ ನಗರದಲ್ಲಿ ಮಾರ್ಕೋಸ್ ಅವರು ವಾಸವಾಗಿದ್ದರು. ಅಪಘಾತದಲ್ಲಿ ಅವರು ಕೈ ಮುರಿದುಕೊಂಡು ಆಸ್ಪತ್ರೆ ಸೇರಿದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಮಾರ್ಕೋಸ್ ಅವರನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಮಾರ್ಕೋಸ್ ಅವರದ್ದು O Negative ರಕ್ತವಾಗಿದ್ದು, ಅಗತ್ಯವಿರುವ ರಕ್ತ ಎಲ್ಲಿಯೂ ಸಿಗಲಿಲ್ಲ. ಹೀಗಿರುವಾಗ ಮಂಜುನಾಥ ನಗರದ ಪ ಪಂ ಮಾಜಿ ಸದಸ್ಯ ಸತೀಶ ನಾಯ್ಕ ಅವರಿಗೆ ಈ ವಿಷಯ ಗೊತ್ತಾಯಿತು. ಅವರು ಎಲ್ಲಾ ಕಡೆ ಹುಡುಕಾಟ ನಡೆಸಿದರು. ಎಲ್ಲಿಯೂ ಆ ಮಾದರಿಯ ರಕ್ತ ಸಿಗಲಿಲ್ಲ. ಸಾಯಿನಾಥ ಉಣಕಲ್, ಮಾರುತಿ ತನೇಕರ್, ವಿಕ್ಟೋರಿಯಾ ಅವರು ವಿವಿಧ ಕಡೆ ಫೋನ್ ಮಾಡಿ ವಿಚಾರಿಸಿದರು. ಆದರೆ, ಎಲ್ಲಿಯೂ ಆ ಮಾದರಿಯ ರಕ್ತ ಸಿಗಲಿಲ್ಲ.
ಹೀಗಾಗಿ, ಕಾರವಾರದ ರಕ್ತದಾನಿ ವಿನಾಯಕ ನಾಯ್ಕ ಚೆಂಡಿಯಾ ಅವರಿಗೆ ಸತೀಶ್ ನಾಯ್ಕ ಅವರು ಫೋನ್ ಮಾಡಿ ಸಹಾಯ ಯಾಚಿಸಿದರು. ಅಪರೂಪದಲ್ಲಿಯೇ ಅಪರೂಪವಾದ ಒ ನೆಗೆಟಿವ್ ರಕ್ತ ಅಗತ್ಯವಿರುವ ಬಗ್ಗೆ ವಿನಾಯಕ ನಾಯ್ಕ ಅವರು ತಮ್ಮ ರಕ್ತದಾನಿಗಳ ವಾಟ್ಸಪ್ ಗ್ರೂಪಿನಲ್ಲಿ ವಿಷಯ ಹಂಚಿಕೊ0ಡರು. ಕುಮಟಾ ಬಾಡದ ಪೊಲೀಸ್ ಸಿಬ್ಬಂದಿ ಅನಂತ ನಾರಾಯಣ ನಾಯ್ಕ ಅವರು ಸದ್ಯ ಕಾರವಾರದ 112 ವಾಹನದ ಚಾಲಕರಾಗಿದ್ದು, ಅವರು ತಕ್ಷಣ ಆಸ್ಪತ್ರೆಗೆ ತೆರಳಿ ರಕ್ತ ನೀಡಿದರು. ಆ ಮೂಲಕ ಅಪಘಾತದಲ್ಲಿ ಗಾಯಗೊಂಡು ನೋವು ಅನುಭವಿಸುತ್ತಿದ್ದ ಮಾರ್ಕೋಸ್ ಅವರ ಜೀವ ಕಾಪಾಡುವಲ್ಲಿ ಪೊಲೀಸ್ ಸಿಬ್ಬಂದಿ ಪ್ರಮುಖ ಪಾತ್ರ ನಿಭಾಯಿಸಿದರು. ಮಗನ ಜೀವ ಉಳಿಸಿದ ಪೊಲೀಸ್’ಗೆ ರೋಗಿಯ ತಾಯಿ ಪ್ರಮಿಳಾ ಅವರು ಕೈ ಮುಗಿದರು.