ಶಿರಸಿ ಎಸಿಯಾಗಿ ಕೆಲಸ ಮಾಡಿದ್ದ ಕಾವ್ಯರಾಣಿ ಅವರು ಮೈಸೂರಿಗೆ ಹೋದ ನಂತರ ಭ್ರಷ್ಟರಾಗಿದ್ದು, ಕಂಡವರ ಕಾಸಿಗೆ ಆಸೆಪಟ್ಟು ಅವರು ಲೋಕಾಯುಕ್ತರ ವಶಕ್ಕೆ ಸಿಲುಕಿದ್ದಾರೆ. ಕಾವ್ಯರಾಣಿ ಅವರು ಬೆಂಗಳೂರಿನ ಡಿ ರೂಪಾ ಅವರ ಬಳಿ 10.50 ಲಕ್ಷ ರೂ ಬೇಡಿದ್ದು, 5.5 ಲಕ್ಷ ರೂ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ನಡೆದಿದೆ.
ಕಾವ್ಯರಾಣಿ ಅವರು ಶಿರಸಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದ್ದರು. ಕಾವ್ಯರಾಣಿ ಅವರು ಭಟ್ಕಳದಲ್ಲಿಯೂ ಪ್ರಭಾರಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದ್ದರು. ಖಡಕ್ ಅಧಿಕಾರಿ ಎಂದೇ ಅವರು ಹೆಸರು ಮಾಡಿದ್ದರು. ಕಷ್ಟಪಟ್ಟು ಈ ಹುದ್ದೆಪಡೆದಿರುವುದಾಗಿ ಹೇಳಿದ್ದ ಅವರು ಅನೇಕ ಬಾರಿ ಸ್ಪೂರ್ತಿದಾಯಕ ಭಾಷಣಗಳನ್ನು ಮಾಡಿದ್ದರು. ವಿವಿಧ ಶಾಲೆಗಳಿಗೂ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪ್ರೇರಣಾ ನುಡಿಗಳನ್ನು ಹೇಳಿಕೊಡುತ್ತಿದ್ದರು. ಕಳೆದ ವರ್ಷ ಅವರು ಶಿರಸಿಯಿಂದ ಅವರು ವರ್ಗವಾಗಿದ್ದು, ಸದ್ಯ ಮೈಸೂರಿನ ಹುಣಸೂರು ಉಪವಿಭಾಗಾಧಿಕಾರಿಯಾಗಿದ್ದರು.
ಎಚ್ ಡಿ ಕೋಟೆ ತಾಲೂಕಿನ ಜಮೀನು ವಿವಾದವೊಂದು ಕಾವ್ಯರಾಣಿ ಅವರು ಉಪವಿಭಾಗಾಧಿಕಾರಿಯಾಗಿರುವ ಕಚೇರಿ ವ್ಯಾಪ್ತಿಗೆ ಒಳಪಟ್ಟಿದ್ದು, ಒಂದು ವರ್ಷದಿಂದ ವಿಚಾರಣೆ ನಡೆಯುತ್ತಿತ್ತು. ಈ ವಿಷಯವಾಗಿ ಬೆಂಗಳೂರಿನ ಡಿ ರೂಪಾ ಅವರ ಬಳಿ ಕಾವ್ಯರಾಣಿ ಅವರು 10.50 ಲಕ್ಷ ರೂ ಲಂಚ ಬೇಡಿದ್ದರು. ಇದರ ಮೊದಲ ಕಂತಾಗಿ ಈಗಾಗಲೇ 5 ಲಕ್ಷ ರೂ ಹಣಪಡೆದಿದ್ದು, ಎರಡನೇ ಕಂತು ಕೊಡುವಂತೆ ಪೀಡಿಸುತ್ತಿದ್ದರು. ತಮ್ಮ ಆಪ್ತ ಸಹಾಯಕ ಶಿವಕುಮಾರ ಅವರ ಮೂಲಕ 2ನೇ ಕಂತಿನ ಹಣಪಡೆಯುವಾಗ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಸದ್ಯ ಕಾವ್ಯರಾಣಿ ಅವರನ್ನು ಲೋಕಾಯುಕ್ತರು ವಶಕ್ಕೆಪಡೆದಿದ್ದಾರೆ.